

ಮಂಗಳೂರು: ಬೋಳಿಯಾರ್ ಗ್ರಾಮದಲ್ಲಿ ಸಂಭವಿಸಿದ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಹೊರಗಿನವರು ಬಾಯಿ ಮುಚ್ಚಿ ಕುಳಿತುಕೊಂಡರೆ ಸಮಸ್ಯೆ ಬಗೆಹರಿಯಲಿದೆ. ಶಾಂತಿ ಸ್ಥಾಪನೆಗೆ ಅವಕಾಶ ನೀಡುವುದೇ ನೈಜ ದೇಶಪ್ರೇಮ. ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡಿ ಸಮಸ್ಯೆ ಸೃಷ್ಟಿಸುವವರು ನಿಜವಾದ ದೇಶದ್ರೋಹಿಗಳು ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಯುವಕರಿಂದ ಊರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆದಿದೆ. ಯಾರೂ ರಾಜಕೀಯ ಮಾಡಿ ಊರಿನ ನೆಮ್ಮದಿ ಹಾಳು ಮಾಡಬೇಡಿ ಎಂದು ಮನವಿ ಮಾಡಿದ ಅವರು, ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗುವುದಕ್ಕೆ ಆಕ್ಷೇಪ ಮಾಡುವುದಿಲ್ಲ. ಆದರೆ ಅಲ್ಲಿ ಅವಾಚ್ಯ ಪದಗಳಿಂದ ನಿಂದನೆ ಮಾಡಿರುವ ಬಗ್ಗೆ ಹೊರಗಿನವರಿಗೆ ಗೊತ್ತಿರಲು ಸಾಧ್ಯವಿಲ್ಲ. ಘಟನೆ ಕುರಿತು ಪೊಲೀಸರು ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಮೆರವಣಿಗೆ ಮುಗಿದ ಬಳಿಕ ಮೂವರು ಬೈಕ್‌ನಲ್ಲಿ ಬಂದು ಪ್ರಚೋದನಕಾರಿ ಭಾಷಣ ನಡೆಸುವ ಉದ್ದೇಶವೇನು? ಇದು ತಪ್ಪು. ಅದಕ್ಕೆ ಪ್ರತಿಯಾಗಿ ಅವರನ್ನು ಹಿಂಬಾಲಿಸಿ ಹಲ್ಲೆ ಮಾಡಿರುವ ಕೃತ್ಯವೂ ತಪ್ಪು. ಈ ಎರಡೂ ಘಟನೆಗಳ ಬಗ್ಗೆ ಪೊಲೀಸರು ಕ್ರಮ ವಹಿಸಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಧ್ವನಿ ಸಂದೇಶ ಹಾಕಿ ಜನರನ್ನು ದಾರಿತಪ್ಪಿಸುವವರ ಮೇಲೆ ಪೊಲೀಸರು ಕ್ರಮ ವಹಿಸಬೇಕು. ಇಂತಹ ಘಟನೆಗಳ ಸಂದರ್ಭ ರಾಜಕಾರಣಿಗಳು ಅಲ್ಲಿ ಭೇಟಿ ನೀಡಿದಾಗ ಮತ್ತಷ್ಟು ಗೊಂದಲಕ್ಕೆ ಕಾರಣವಾಗುತ್ತದೆ. ವಿಧಾನಸಭೆ ಸ್ಪೀಕರ್ ಆಗಿ ಐದು ವರ್ಷ ಮುಂದುವರಿಯಲಿದ್ದೇನೆಯೇ ಎಂಬುದು ಗೊತ್ತಿಲ್ಲ. ಹಣೆಬರಹ ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಗೊತ್ತಿಲ್ಲ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸ್ಥಳೀಯ ಶಾಸಕರ ಜವಾಬ್ದಾರಿ
ದಕ್ಷಿಣ ಕನ್ನಡದಲ್ಲಿ ಜೂಜಾಟ, ಮಸಾಜ್ ಪಾರ್ಲರ್, ವಿಡಿಯೋ ಗೇಮ್, ಅಕ್ರಮ ಮರಳು ದಂಧೆ ಹೆಚ್ಚಾಗುತ್ತಿದೆಯಲ್ಲವೇ? ಎನ್ನುವ ಸುದ್ದಿಗಾರರ ಪ್ರಶ್ನೆಗೆ, 2018ರಿಂದ 20ರ ಅವಧಿಯಲ್ಲಿ ಉಸ್ತುವಾರಿ ಸಚಿವನಾಗಿದ್ದಾಗ ಎಲ್ಲ ಅಕ್ರಮ ಕೆಲಸಗಳನ್ನು ಬಂದ್ ಮಾಡಿಸಿದ್ದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಎಲ್ಲವೂ ಮತ್ತೆ ತೆರೆಯಿತು ಎಂದು ಖಾದರ್ ಹೇಳಿದರು. ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲಾಗಿತ್ತು. ಮತ್ತೆ ಬಂದ್ ಆಯಿತು. ಜಿಲ್ಲೆಯ ಇತರ ಸ್ಥಳೀಯ ಶಾಸಕರು ಯಾರೂ ಮಾತನಾಡುತ್ತಿಲ್ಲ. ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಲೂ ಸ್ಕಿಲ್ ಗೇಮ್, ಕ್ಲಬ್ ತೆರೆಯಲು ಅವಕಾಸ ನೀಡುತ್ತಿಲ್ಲ. ಕ್ಷೇತ್ರದಲ್ಲಿ ಒಬ್ಬರು ರಿಕ್ರಿಯೇಶನ್ ಕ್ಲಬ್‌ಗಾಗಿ ಹೈಕೋರ್ಟ್‌ನಿಂದ ಆದೇಶ ತಂದರು. ಅಲ್ಲಿ 24 ಗಂಟೆಯೂ ಪೊಲೀಸ್ ಜೀಪ್ ಇರುವಂತೆ ಮಾಡಿದೆ. ಒಂದು ವಾರದಲ್ಲಿ ಬಂದ್ ಆಯಿತು. ಅಕ್ರಮ ತಡೆ ಸ್ಥಳೀಯ ಶಾಸಕರ ಜವಾಬ್ದಾರಿ ಎಂದರು.
ಪೊಲೀಸ್ ತನಿಖೆ ಬಳಿಕವೂ ನ್ಯಾಯ ದೊರಕಿಲ್ಲ ಎಂದು ತನ್ನ ಬಳಿಗೆ ಯಾರಾದರೂ ಬಂದರೆ ಖಂಡಿತ ಪರಿಶೀಲಿಸುತ್ತೇನೆ. ನನಗೆ ಅಂತಹ ದೂರು ಬಂದಿಲ್ಲ. ನಿರಪರಾಧಿಗಳಿಗೆ ಪೊಲೀಸರು ತೊಂದರೆ ನೀಡಬಾರದು. ಆದರೆ ಪ್ರಕರಣದ ನೈಜ ಆರೋಪಿಗಳನ್ನು ರಕ್ಷಿಸುವ ಪ್ರಯತ್ನವೂ ಸಲ್ಲ.