

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಕೃಷಿಕರನ್ನು ಮನೆ ಬಾಗಿಲಿಗೆ ಬಂದು ಗುರುತಿಸುವ ಕಾರ್ಯ ಅಭಿನಂದನೀಯ ಎಂದು ಕೃಷಿಕ ಬೈಲಗುತ್ತು ಸತೀಶ್ ಶೆಟ್ಟಿ ಹೇಳಿದರು. ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಸಹಕಾರದಲ್ಲಿ ವಿಶ್ವ ಆಹಾರ ದಿನಾಚರಣೆ ಪ್ರಯುಕ್ತ ಆಹಾರ ಜಾಗೃತಿ ಅಭಿಯಾನ-2024 ಹಾಗೂ ಸಾಧಕ ಕೃಷಿಕರಿಗೆ ಗೌರವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಳೆದ ಕೆಲ ವರ್ಷಗಳಿಂದ ನಂದಿನಿ ತಟದಲ್ಲಿ ಏಳು ಎಕರೆಯಲ್ಲಿ ಕೃಷಿ ಮಾಡುತ್ತ ತೃಪ್ತಿಯಿಂದ ಇದ್ದೇನೆ. ಈ ಬಾರಿ ಭತ್ತದ ಕೃಷಿ ಕಟಾವಿಗೆ ಬಂದಿದ್ದು, ಮಳೆಯ ಕಾರಣ ಸಮಸ್ಯೆಯಾಗುತ್ತಿದೆ. ಕೃಷಿ ಚಟುವಟಿಕೆ ಅಷ್ಟೇನೂ ಲಾಭದಾಯಕವಲ್ಲದಿದ್ದರೂ ಇದರಲ್ಲಿ ಸಂತೃಪ್ತಿ ಇದೆ ಎಂದರು.
ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹಣವನ್ನು ತಿನ್ನಲಾಗದು. ಅನ್ನವನ್ನಷ್ಟೇ ತಿನ್ನಬಹುದು. ಇದನ್ನು ಬೆಳೆಸುವ ಕೃಷಿಕರನ್ನು ಪ್ರೋತ್ಸಾಹಿಸಬೇಕು. ಕೃಷಿಯೆಂದರೆ ಸಮಾಜ ಸೇವೆಯೂ ಹೌದು ಎಂದರು.
ಪಂಜ ಕೊಯ್ಕುಡೆ ಶ್ರೀ ವಿಠೋಬ ಭಜನಾ ಮಂದಿರದ ಅಧ್ಯಕ್ಷ ಕರುಣಾಕರ ಶೆಟ್ಟಿ ಪಂಜಗುತ್ತು, ನಂದಿನಿ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ನವೀನ್ ಟಿ.ಶೆಟ್ಟಿ ನಲ್ಯಗುತ್ತು, ಜನವಿಕಾಸ ಸಮಿತಿ ಮುಲ್ಕಿ ಘಟಕ ಅಧ್ಯಕ್ಷ ಶಶಿಕರ ಕೆರೆಕಾಡು, ಮಾಜಿ ಅಧ್ಯಕ್ಷೆ ಶೋಭಾ ರಾವ್, ಸದಸ್ಯರಾದ ಜಿತೇಂದ್ರ ವಿ.ರಾವ್, ಅಕ್ಷತಾ ಶೆಟ್ಟಿ, ನೀತಾ ಶೆಟ್ಟಿ, ಆನಂದ ಮೇಲಾಂಟ ಮತ್ತಿತರರು ಉಪಸ್ಥಿತರಿದ್ದರು.
ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ದಾಮೋದರ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಗೀತಾ ಶೆಟ್ಟಿ, ಧನ್ಯವಾದ ಅರ್ಪಿಸಿದರು. ಜಿತೇಂದ್ರ ವಿ.ರಾವ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೃಷಿ ರತ್ನ 2024ರ ಪ್ರಶಸ್ತಿಯನ್ನು ಕೃಷಿ ಕ್ಷೇತ್ರದ ಸಾಧಕ, ಸಮಾಜ ಸೇವಕ, ಹವ್ಯಾಸಿ ಭಾಗವತ ಸತೀಶ್ ಶೆಟ್ಟಿ ಬೈಲಗುತ್ತು ಅವರಿಗೆ ನೀಡಿ ಸನ್ಮಾನಿಸಲಾಯಿತು.