ಗ್ರಾಮ ಪಂಚಾಯತ್​ನಲ್ಲೂ ರೆಸಾರ್ಟ್ ರಾಜಕೀಯ​; ಬೆಂಗಳೂರಿನ ರೆಸಾರ್ಟ್​ನಲ್ಲಿ 40 ದಿನ ಇದ್ದು ವಿಮಾನದಲ್ಲಿ ಬಂದಿಳಿದ ಸದಸ್ಯರು!

Resort
Published on

ಹಾವೇರಿ: ರೆಸಾರ್ಟ್ಸ್​ ಪಾಲಿಟಿಕ್ಸ್ ಈಗ ಗ್ರಾಮ ಪಂಚಾಯಿತಿ ಮಟ್ಟಕ್ಕೂ ತಲುಪಿದ್ದು, ಗ್ರಾಮ ಪಂಚಾಯಿತಿಯ ಸದಸ್ಯರನ್ನು ಬೆಂಗಳೂರಿನ ರೆಸಾರ್ಟ್ಸ್​ನಲ್ಲಿ 40 ದಿನಗಳ ಕಾಲ ಇರಿಸಿದ ಪ್ರಕರಣವೊಂದು ನಡೆದಿದೆ. ಮಾತ್ರವಲ್ಲ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಕೆಳಗಿಳಿಸಲು ಸದಸ್ಯರು ವಿಮಾನದಲ್ಲಿ ಬಂದಿಳಿದಂತಹ ಪ್ರಕರಣ ಇದಾಗಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕು ದೇವರಗುಡ್ಡ ಗ್ರಾಮ ಪಂಚಾಯತಿಯ 13 ಸದಸ್ಯರನ್ನು ಬೆಂಗಳೂರಿನ ರೆಸಾರ್ಟ್​ವೊಂದರಲ್ಲಿ 40 ದಿನಗಳ ಕಾಲ ಇರಿಸಲಾಗಿತ್ತು. ಆಪರೇಷನ್ ಕಮಲ ಮಾದರಿಯಲ್ಲಿ ಆಪರೇಷನ್ ಗ್ರಾಮ ಪಂಚಾಯತ್ ನಡೆದಿದ್ದು, ಅವಿಶ್ವಾಸ ನಿರ್ಣಯ ಮಂಡನೆಗೆ ಸದಸ್ಯರು ಇಂದು ವಿಮಾನದಲ್ಲಿ ಬಂದಿಳಿದರು.

ದೇವರಗುಡ್ಡ ಗ್ರಾಮ ಪಂಚಾಯತ್ ಹಾಲಿ ಅಧ್ಯಕ್ಷ ಮಾಲತೇತ ದುರಗಪ್ಪ ನಾಯರ್ ಆಡಳಿತಾವಧಿ ವಿಚಾರದಲ್ಲಿ ನಡೆದ ಒಪ್ಪಂದದಂತೆ 15 ತಿಂಗಳ ಬಳಿಕ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕಾಗಿತ್ತು. ಆದರೆ 15 ತಿಂಗಳು ಕಳೆದರೂ ಅಧ್ಯಕ್ಷ ಸ್ಥಾನ ಬಿಡದೆ ಮಾಲತೇಶ್ ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಗ್ರಾ.ಪಂ ಅಧ್ಯಕ್ಷ ಮಾಲತೇಶ್ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆಗೆ ಗ್ರಾಮಪಂಚಾಯಿತಿಯ 13 ಸದಸ್ಯರು ಮುಂದಾಗಿದ್ದು, ಆ ಪೈಕಿ 9 ಮಂದಿ ದೇವರಗುಡ್ಡ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಗುರೂಜಿ ಬಣದವರಾಗಿದ್ದು, ಉಳಿದ ನಾಲ್ವರು ಬಿಜೆಪಿಯವರು. ಈ ಮಧ್ಯೆ ಮಾಲತೇಶ್ ಗ್ರಾ.ಪಂ ಸದಸ್ಯರನ್ನು ಹೈಜಾಕ್ ಮಾಡಬಹುದು ಎಂಬ ಆತಂಕದಿಂದ ಸಂತೋಷ್ ಭಟ್ ಅವರೆಲ್ಲರನ್ನೂ ಬೆಂಗಳೂರಿನ ರೆಸಾರ್ಟ್​ಗೆ ಕಳಿಸಿ 40 ದಿನಗಳ ಕಾಲ ಅಲ್ಲಿರಿಸಿದ್ದರು.

ಇಂದು ವಿಮಾನದಲ್ಲಿ ಆಗಮಿಸಿದ್ದ ಅವರನ್ನು ನಂತರ ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ತಾಲೂಕು ಉಪ ವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಅವರ ಸಮ್ಮುಖದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net