ಮೀಸಲಾತಿ ಬೇಡಿಕೆ: ಉನ್ನತ ಮಟ್ಟದ ಸಮಿತಿಗೆ ಅಧ್ಯಕ್ಷ, ಸದಸ್ಯರ ನೇಮಿಸಿದ ಸರ್ಕಾರ

bsy
bsy
Published on

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸೇರಿದಂತೆ ವಿವಿಧ ವರ್ಗಗಳಿಗೆ ಮೀಸಲಾತಿ ನೀಡಬೇಕು ಎನ್ನುವ ಹೋರಾಟಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರ ಮೀಸಲಾತಿ ಬೇಡಿಕೆ ಪರಾಮರ್ಶಿಸಿಲು ಮೂರು ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿತ್ತು.

ಇಂದು ಈ ಸಮಿತಿಗೆ ಸರ್ಕಾರ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದೆ.

ಆದೇಶದ ಪ್ರಕಾರ, ಸಮಿತಿಗೆ ಅಧ್ಯಕ್ಷರಾಗಿ ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಸುಭಾಸ್ ಆಡಿ, ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿ ಕೆ ರತ್ನಪ್ರಭಾ ಹಾಗೂ ಮೈಸೂರು ಮಹಾರಾಣಿ ಕಲಾ ಕಾಲೇಜಿನ ಬಿ ವಿ ವಸಂತಕುಮಾರ್ ಅವರನ್ನು ನೇಮಿಸಲಾಗಿದೆ.

ಲಿಂಗಾಯತ ಪಂಚಮಸಾಲಿಗಳು ತಮ್ಮನ್ನು ಪ್ರವರ್ಗ 2ಎ ದಲ್ಲಿ ಸೇರಿಸಬೇಕು, ಕುರುಬರು ತಮ್ಮನ್ನು ಎಸ್​ಟಿಗೆ ಸೇರಿಸಬೇಕು, ವಾಲ್ಮೀಕಿಗಳು ತಮಗೆ ಮೀಸಲು ಪ್ರಮಾಣ ಹೆಚ್ಚಿಸಬೇಕು ಹಾಗೂ ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಬೇಕು ಎನ್ನುವ ಹೋರಾಟ ಬೇಡಿಕೆಗಳು ಕಳೆದ ಮೂರ್ನಾಲ್ಕು ತಿಂಗಳಿಂದ ದೊಡ್ಡ ಸ್ವರೂಪ ಪಡೆದುಕೊಂಡಿರುವುದರಿಂದ, ಈ ಬೇಡಿಕೆಗಳನ್ನು ಸಂವಿಧಾನದ ಚೌಕಟ್ಟಿನಲ್ಲಿ ಪರಿಹರಿಸಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net