ಇಶಾ ಅಂಬಾನಿ ಬಿಗ್ ಡೀಲ್.. ಒಳಉಡುಪು ತಯಾರಿಕೆಗೆ ಇಸ್ರೇಲ್‌ ಕಂಪನಿಯೊಂದಿಗೆ ಒಪ್ಪಂದ!

Isha Ambani
Published on

ನವದೆಹಲಿ: ದೇಶದ ದೊಡ್ಡ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ನ ಚಿಲ್ಲರೆ ವ್ಯಾಪಾರ(ರಿಟೇಲ್)ದ ಉಸ್ತುವಾರಿ ಹೊಣೆ ಹೊತ್ತಿರುವ ಇಶಾ ಅಂಬಾನಿ ಇತ್ತೀಚಿಗೆ ಮತ್ತೊಂದು ದೊಡ್ಡ ಡೀಲ್ ನಡೆಸಿದ್ದಾರೆ. ಇಸ್ರೇಲ್‌ನ ಪ್ರಮುಖ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಸೆ.10 ರಂದು ಘೋಷಿಸಲಾಗಿದೆ.

ಇಸ್ರೇಲ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಡೆಲ್ಟಾ ಗಲಿಲ್ ಇಂಡಸ್ಟ್ರೀಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಜಂಟಿ ಉದ್ಯಮವನ್ನು ಸ್ಥಾಪಿಸಲು ಎರಡೂ ಕಂಪನಿಗಳು ನಿರ್ಧರಿಸಿವೆ.

ಡೆಲ್ಟಾ ಗಲಿಲ್ ಕಂಪನಿಯು ಪ್ರಾಥಮಿಕವಾಗಿ ಒಳಉಡುಪುಗಳ ಪ್ರಮುಖ ತಯಾರಕ ಸಂಸ್ಥೆ. ಇದು ಬ್ರಾಂಡೆಡ್ ಆಗಿದ್ದು, ಈಗ ಜಂಟಿ ಸಹಭಾಗಿತ್ವದಡಿಯಲ್ಲಿ ಎರಡೂ ಕಂಪನಿಗಳು ತಲಾ 50 ಪರ್ಸೆಂಟ್ ಷೇರುಗಳೊಂದಿಗೆ ಜಂಟಿ ಉದ್ಯಮವನ್ನು ಸ್ಥಾಪಿಸಲು ನಿರ್ಧರಿಸಿವೆ.

ಡೆಲ್ಟಾ ಗಲಿಲ್ ಕಂಪನಿಯು ಬ್ರಾಂಡೆಡ್ ಮತ್ತು ಖಾಸಗಿ ಲೇಬಲ್ ಇಂಟಿಮೇಟ್, ಆಕ್ಟಿವ್ ವೇರ್, ಲೌಂಜ್ ವೇರ್, ಡೆನಿಮ್ ಉಡುಪುಗಳನ್ನು ಮಕ್ಕಳು, ಮಹಿಳೆಯರು, ಪುರುಷರಿಗಾಗಿ ತಯಾರಿಸುತ್ತದೆ.

ಇದೀಗ ಭಾರತೀಯ ಮಾರುಕಟ್ಟೆ ಪ್ರವೇಶಿಸುವ ನಿಟ್ಟಿನಲ್ಲಿ ಪ್ರಸಿದ್ಧ ಇಸ್ರೇಲ್ ಕಂಪನಿಯ ಬ್ರ್ಯಾಂಡ್ ಗಳನ್ನು ಇಲ್ಲಿ ಪರಿಚಯಿಸಲು ಆ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ರಿಲಯನ್ಸ್ ರೀಟೇಲ್ ವ್ಯಾಪಾರ ವೃದ್ಧಿಗೆ ಮುಂದ್ಆಗಿದೆ ಎನ್ನಲಾಗಿದೆ.

ಭಾರತೀಯ ಗ್ರಾಹಕರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಎರಡೂ ಕಂಪನಿಗಳು ಇಲ್ಲಿನ ಬೇಡಿಕೆಗೆ ಅನುಗುಣವಾಗಿ ಗಾರ್ಮೆಂಟ್ ಉತ್ಪನ್ನಗಳನ್ನು ನೀಡಲು ಬದ್ಧವಾಗಿರುವುದಾಗಿ ಘೋಷಿಸಿವೆ. ಜಂಟಿ ಉದ್ಯಮದ ಅಡಿಯಲ್ಲಿ ಮುಂದಿನ 18 ತಿಂಗಳಲ್ಲಿ ವ್ಯಾಪಾರ ಮಳಿಗೆಗಳನ್ನು ಪ್ರಾರಂಭಿಸುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net