

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ದೇಶವಿರೋಧಿಯಾಗಿ ಮಾತನಾಡುವುದು, ದೇಶ ಒಡೆಯಲು ಯತ್ನಿಸುತ್ತಿರುವ ಶಕ್ತಿಗಳ ಪರ ನಿಲ್ಲುವುದು ಅಭ್ಯಾಸವಾಗಿ ಹೋಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದರು.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕೆಗಳ ಸುರಿಮಳೆಗರೆದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಜೆಕೆಎನ್‌ಸಿಯ ದೇಶ ವಿರೋಧಿ ಮತ್ತು ಮೀಸಲಾತಿ ವಿರೋಧಿ ಅಜೆಂಡಾವನ್ನು ಬೆಂಬಲಿಸುವ ಮೂಲಕ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿರುವ ಶಕ್ತಿಗಳ ಪರವಾಗಿ ನಿಲ್ಲುವುದು ಮತ್ತು ದೇಶ ವಿರೋಧಿ ಮಾತನಾಡುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಭ್ಯಾಸವಾಗಿದೆ. ದೇಶದ ಜನರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ವಿದೇಶಿ ನೆಲದಲ್ಲಿ ಭಾರತದ ವಿರುದ್ಧ ಮಾತನಾಡುವ ರಾಹುಲ್ ಗಾಂಧಿ ಅವರು ರಾಷ್ಟ್ರೀಯ ಭದ್ರತೆ ಮತ್ತು ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಭಾಷೆಯಿಂದ ಭಾಷೆಗೆ, ಪ್ರದೇಶದಿಂದ ಪ್ರದೇಶಕ್ಕೆ, ಧರ್ಮದಿಂದ ತಾರತಮ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಅವರ ಒಡೆದು ಆಳುವ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ದೇಶದಲ್ಲಿ ಮೀಸಲಾತಿಯನ್ನು ರದ್ದುಪಡಿಸುವ ಉದ್ದೇಶದಿಂದ ಮತ್ತೊಮ್ಮೆ ಕಾಂಗ್ರೆಸ್‌ನ ಮೀಸಲಾತಿ ವಿರೋಧಿ ಮುಖವನ್ನು ರಾಹುಲ್ ಗಾಂಧಿ ದೇಶದ ಮುಂದೆ ತಂದಿದ್ದಾರೆ. ಬಿಜೆಪಿ ಇರುವವರೆಗೆ ಮೀಸಲಾತಿಯನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ದೇಶದ ಏಕತೆಯೊಂದಿಗೆ ಆಟವಾಡಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿಗೆ ಹೇಳಲು ನಾನು ಬಯಸುತ್ತೇನೆ ಎಂದು ಅಮಿತ್ ಶಾ ಹೇಳಿದರು.
ಮಂಗಳವಾರ ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಭೆಯಲ್ಲಿ ರಾಹುಲ್ ಲೋಕಸಭಾ ಚುನಾವಣೆಗೆ 3 ತಿಂಗಳ ಮೊದಲು ತಮ್ಮ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಬಿಜೆಪಿಗೆ ಲಾಭವಾಗಿದ್ದು, ಚುನಾವಣಾ ಆಯೋಗವೂ ಮನಸೋ ಇಚ್ಛೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದರು.