ಚೆನ್ನೈ: ಕಾಲಿವುಡ್ ಸ್ಟಾರ್ ನಟ ಜಯಂ ರವಿ (Jayam Ravi) ಅವರು ತಮ್ಮ ಪತ್ನಿ ಆರತಿ (Aarthi)ಗೆ ವಿಚ್ಛೇದನ (Divorce) ನೀಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಸುದ್ದಿ ತಮಿಳು ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಇತ್ತೀಚೆಗಷ್ಟೇ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ ಬೇರ್ಪಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಜಯಂ ರವಿ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಪತ್ರವೊಂದನ್ನು ಹಂಚಿಕೊಳ್ಳುವ ಮೂಲಕ ಡಿವೋರ್ಸ್ ಖಚಿತಪಡಿಸಿದರು. ಇದರ ಬೆನ್ನಲ್ಲೇ ಆರತಿ ಕೂಡ ಪತ್ರವೊಂದನ್ನು ಹಂಚಿಕೊಳ್ಳುವ ಮೂಲಕ ರವಿ ವಿರುದ್ಧ ಅಸಮಾಧಾನ ಹೊರಹಾಕಿದರು. ಏಕಪಕ್ಷೀಯವಾಗಿ ಡಿವೋರ್ಸ್ ಘೋಷಣೆ ಮಾಡಿದ್ದಾರೆ. ಇದರಿಂದ ನನಗೂ ಮತ್ತು ನನ್ನ ಮಕ್ಕಳಿಗೂ ಅನ್ಯಾಯವಾಗಿದೆ ಎಂದು ಧ್ವನಿ ಎತ್ತಿದರು.
ಸದ್ಯ ಈ ಡಿವೋರ್ಸ್ ಕೇಸ್ ಕೊರ್ಟ್ನಲ್ಲಿ ನಡೆಯುತ್ತಿದೆ. ಇದರ ನಡುವೆ ಅನೇಕ ವದಂತಿಗಳು ಹರಿದಾಡುತ್ತಿವೆ. ಅದೇನೆಂದರೆ, ಜಯಂ ರವಿ ಅವರ ವಿಚ್ಛೇದನಕ್ಕೆ ಗಾಯಕಿ ಕೆನಿಶಾ ಫ್ರಾನ್ಸಿಸ್ (Singer Keneeshaa) ಕಾರಣ ಎಂಬ ಸುದ್ದಿ ಕಾಲಿವುಡ್ ಗಲ್ಲಿಯೊಳಗೆ ಹರಿದಾಡುತ್ತಿದೆ. ಇಬ್ಬರ ನಡುವೆ ಸಂಬಂಧ ಇದೆ ಎಂಬ ಗುಸು ಗುಸು ಕೇಳಿಬರುತ್ತಿದೆ. ಆದರೆ, ಈ ವಿಚಾರದಲ್ಲಿ ಕೆನಿಶಾ ಅವರನ್ನು ಎಳೆದುತರಬೇಡಿ ಎಂದು ಜಯಂ ರವಿ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಈ ಪ್ರಕರಣದ ಬಗ್ಗೆ ಕೊನೆಗೂ ಗಾಯಕಿ ಕೆನಿಶಾ ಮೌನ ಮುರಿದಿದ್ದಾರೆ.
ತಮಿಳಿನ DT NEXT ನ್ಯೂಸ್ ಪೇಪರ್ಗೆ ನೀಡಿದ ಸಂದರ್ಶನದಲ್ಲಿ ಕೆನಿಶಾ, ಜಯಂ ರವಿ ಜತೆಗಿನ ಸಂಬಂಧವನ್ನು ನಿರಾಕರಿಸಿದ್ದಾರೆ. ಜಯಂ ರವಿ ಜತೆಗಿನ ನನ್ನ ಸ್ನೇಹ ಕೇವಲ ವೃತ್ತಿಪರವಾದದ್ದು. ಜಯಂ ರವಿ ನನ್ನ ಸ್ನೇಹಿತ ಮತ್ತು ಗ್ರಾಹಕ. ಅವರ ಡಿವೋರ್ಸ್ಗೆ ನಾನು ಕಾರಣ ಎಂದು ಅನೇಕು ಹೇಳುತ್ತಿದ್ದಾರೆ. ಆದರೆ, ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ಜಯಂ ರವಿ ಅವರು ತಮ್ಮ ಪತ್ನಿಗೆ ವಿಚ್ಛೇದನ ನೋಟಿಸ್ ಕಳುಹಿಸಿದಾಗಲೇ ಆ ಬಗ್ಗೆ ನನಗೆ ಗೊತ್ತಾಗಿದ್ದು ಎಂದು ಕೆನಿಶಾ ಹೇಳಿದ್ದಾರೆ.
ಇದನ್ನೂ ಓದಿ: ಆ ಗಾಯಕಿಯೇ ಜಯಂ ರವಿ ಡಿವೋರ್ಸ್ಗೆ ಕಾರಣ? ಗೋವಾ ರಹಸ್ಯ ಬಯಲು, ಗಂಡನ ಮೇಲೆ ಆರತಿ ಆಕ್ರೋಶ
ಇಷ್ಟೇ ಅಲ್ಲದೆ, ಇದು ನಿಮ್ಮ ಕುಟುಂಬದ ಸಮಸ್ಯೆಯಲ್ಲ, ಬೇರೆ ಕುಟುಂಬದ ಸಮಸ್ಯೆಯಾಗಿದೆ. ಹೀಗಾಗಿ ನೀವು ಅದರಿಂದ ದೂರ ಉಳಿಯಿರಿ. ಈ ವಿಚಾರಕ್ಕೆ ನನ್ನನ್ನು ಎಳೆದು ತರಬೇಡಿ. ನನಗೆ ನನ್ನದೇಯಾದ ಕೆಲಸ ಇದೆ. ಇದಕ್ಕೆಲ್ಲ ನನಗೆ ಸಮಯ ಇಲ್ಲ. ನನ್ನ ಮನೆಯ ಬಾಗಿಲನ್ನು ಬಡಿಯಲು ಮತ್ತು ನನ್ನ ಸಮಗ್ರತೆಯನ್ನು ಪ್ರಶ್ನೆ ಮಾಡಲು ನಾನು ಬಿಡುವುದಿಲ್ಲ ಎಂದು ಹೇಳುವ ಮೂಲಕ ಕೆನಿಶಾ ಅವರು ವಿವಾದಕ್ಕೆ ತೆರೆಎಳೆದಿದ್ದಾರೆ.
ಈ ವಿಚಾರವಾಗಿ ನಾನು ಬೇರೆ ಯಾವುದೇ ಮಾಧ್ಯಮಗಳ ಜೊತೆ ಮಾತನಾಡುವುದಿಲ್ಲ. ಇದೇ ನನ್ನ ಕೊನೆಯ ಮಾತುಗಳು ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಸಂದರ್ಶನದ ಫೋಟೋವನ್ನು ಶೇರ್ ಮಾಡಿ ತಿಳಿಸಿದ್ದಾರೆ.
ಆರತಿ ಬರೆದ ಪತ್ರದಲ್ಲಿ ಏನಿತ್ತು?
ನನ್ನ ಗಮನಕ್ಕೆ ತರದೆ ಅಥವಾ ಒಪ್ಪಿಗೆಯಿಲ್ಲದೆ ನಮ್ಮ ವೈವಾಹಿಕ ಜೀವನದ ಬಗ್ಗೆ ಇತ್ತೀಚಿಗೆ ಹೊರಡಿಸಿದ ಸಾರ್ವಜನಿಕ ಪ್ರಕಟಣೆಯಿಂದ ನಾನು ಆಘಾತಕ್ಕೆ ತೀವ್ರ ಒಳಗಾಗಿದ್ದೇನೆ ಮತ್ತು ದುಃಖಿತಳಾಗಿದ್ದೇನೆ. 18 ವರ್ಷಗಳ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಮಹತ್ವದ ವಿಷಯವನ್ನು ತುಂಬಾ ಗೌರವಯುತವಾಗಿ ಮತ್ತು ಗೌಪ್ಯತೆಯಿಂದ ನಿರ್ವಹಿಸಬೇಕೆಂದು ನಾನು ನಂಬುತ್ತೇನೆ. ನಾನು ನನ್ನ ಪತಿಯೊಂದಿಗೆ ನೇರವಾಗಿ ಮಾತನಾಡಲು ಹಲವು ಬಾರಿ ಪ್ರಯತ್ನಿಸಿದೆ. ದುರದೃಷ್ಟವಶಾತ್, ನನಗೆ ಆ ಅವಕಾಶ ಸಿಗಲಿಲ್ಲ. ಇದೀಗ ಈ ಡಿಢೀರ್ ಡಿವೋರ್ಸ್ ಪ್ರಕಟಣೆಯಿಂದ ನನ್ನ ಮಕ್ಕಳು ಮತ್ತು ನಾನು ಆಘಾತಕ್ಕೆ ಒಳಗಾಗಿದ್ದೇವೆ. ನಮ್ಮ ಮದುವೆಯನ್ನು ವಿಸರ್ಜಿಸುವ ಮತ್ತು ಪ್ರತ್ಯೇಕಗೊಳ್ಳುವ ನಿರ್ಧಾರವು ಸಂಪೂರ್ಣವಾಗಿ ಏಕಪಕ್ಷೀಯವಾಗಿದೆ. ಇದರಿಂದ ನಮ್ಮ ಕುಟುಂಬಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಈ ಘಟನೆಯು ನಮಗೆ ಅತೀವ ದುಃಖವನ್ನುಂಟುಮಾಡಿದ್ದರೂ, ನಾನು ಗೌರವದಿಂದ ವರ್ತಿಸಬೇಕೆಂದು ಭಾವಿಸುತ್ತೇನೆ. ಈ ಕಾರಣಕ್ಕೆ ನಾನು ಈವರೆಗೂ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ. ಇನ್ನು ಈ ಪ್ರಕರಣದಲ್ಲಿ ನನ್ನನ್ನು ದೂಷಿಸುವ ಮತ್ತು ನನ್ನ ಪಾತ್ರವನ್ನು ತಪ್ಪಾಗಿ ನಿರೂಪಿಸುವ ಸುದ್ದಿಯಿಂದ ನಾನು ತೀವ್ರವಾಗಿ ನೋಂದಿದ್ದೇನೆ. ತಾಯಿಯಾಗಿ ನನ್ನ ಮೊದಲ ಆದ್ಯತೆ ಯಾವಾಗಲೂ ನನ್ನ ಮಕ್ಕಳ ಯೋಗಕ್ಷೇಮವಾಗಿದೆ. ಈ ಘಟನೆ ನನ್ನ ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಹೆದರುತ್ತೇನೆ. ನಮ್ಮ ಮಕ್ಕಳ ಯೋಗಕ್ಷೇಮದ ಮೇಲೆ ನನ್ನ ಗಮನವಿದೆ ಮತ್ತು ಈ ಕಷ್ಟದ ಸಮಯದಲ್ಲಿ ನಾನು ಅವರನ್ನು ರಕ್ಷಿಸುತ್ತೇನೆ. ನಾನು ಪತ್ರಿಕೆಗಳು, ಮಾಧ್ಯಮಗಳು ಮತ್ತು ನಮ್ಮ ಆತ್ಮೀಯ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ, ಏಕೆಂದರೆ, ಸಮಯಕ್ಕೆ ಸತ್ಯವು ಹೊರಬರುತ್ತದೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ದಯೆ ಮತ್ತು ಪ್ರೀತಿ ನಮ್ಮ ಶಕ್ತಿ. ನಮ್ಮ ಜೀವನದ ಈ ಅಧ್ಯಾಯದಲ್ಲಿ ನಿಮ್ಮ ಗೌಪ್ಯತೆಯನ್ನು ಕೋರುತ್ತೇನೆ ಎಂದಿದ್ದಾರೆ.
ಜಯಂ ರವಿ ಪತ್ರದಲ್ಲೇನಿತ್ತು?
ಹೆಚ್ಚು ಯೋಚಿಸಿದ ನಂತರ ಆರತಿಯೊಂದಿಗೆ ನನ್ನ ವೈವಾಹಿಕ ಜೀವನದಿಂದ ದೂರವಿರಲು ನಾನು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ಆತುರವಾಗಿ ತೆಗೆದುಕೊಂಡಿಲ್ಲ, ಕೆಲವು ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ. ಈ ಸಮಯದಲ್ಲಿ ನನ್ನ ಖಾಸಗಿತನ ಮತ್ತು ನನಗೆ ಹತ್ತಿರವಿರುವವರ ಗೌಪ್ಯತೆಯನ್ನು ಗೌರವಿಸಲು ನಾನು ಎಲ್ಲರಿಗೂ ವಿನಂತಿಸುತ್ತೇನೆ. ಈ ನಿರ್ಧಾರವು ನನ್ನ ಸ್ವಂತ ನಿರ್ಧಾರವಾಗಿದೆ ಮತ್ತು ಈ ವಿಷಯವು ನನ್ನ ವೈಯಕ್ತಿಕ ವಿಷಯವಾಗಿ ಉಳಿಯಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನನ್ನ ಅಭಿನಯದ ಮೂಲಕ ನನ್ನ ಅಭಿಮಾನಿಗಳು ಮತ್ತು ಜನರಲ್ಲಿ ಸಂತೋಷ ಮತ್ತು ತೃಪ್ತಿಯನ್ನು ತರುವುದು ನನ್ನ ಆದ್ಯತೆಯಾಗಿದೆ. ನಾನು ಎಂದೆಂದಿಗೂ ನಿಮ್ಮ ಜಯಂ ರವಿಯಾಗಿರಲು ಬಯಸುತ್ತೇನೆ. ನೀವು ನನಗೆ ನೀಡುತ್ತಿರುವ ಬೆಂಬಲಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನಿಮ್ಮ ನಿರಂತರ ಬೆಂಬಲಕ್ಕೆ ಧನ್ಯವಾದಗಳು ಎಂದು ಜಯಂ ರವಿ ಹೇಳಿದ್ದಾರೆ.
Grateful for your love and understanding.
Jayam Ravi pic.twitter.com/FNRGf6OOo8
— Jayam Ravi (@actor_jayamravi) September 9, 2024
ಅಂದಹಾಗೆ ಜಯಂ ರವಿ ಅವರು 2009ರಲ್ಲಿ ಆರತಿಯನ್ನು ವಿವಾಹವಾದರು. ಆರತಿ, ತಮಿಳಿನ ಖ್ಯಾತ ನಿರ್ಮಾಪಕಿ ಸುಜಾತಾ ವಿಜಯ್ ಕುಮಾರ್ ಅವರ ಮಗಳು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಪೈಕಿ ಆರವ್ ಇತ್ತೀಚೆಗೆ ಟಿಕ್ ಟಿಕ್ ಟಿಕ್ ಚಿತ್ರದಲ್ಲಿ ನಟಿಸಿದ್ದರು. ರವಿ ಮತ್ತು ಆರತಿ ಜೋಡಿ ಕಾಲಿವುಡ್ ಇಂಡಸ್ಟ್ರಿಯಲ್ಲಿ ಮುದ್ದಾದ ಜೋಡಿ ಎಂದೇ ಹೆಸರುವಾಸಿಯಾಗಿತ್ತು. ಆದರೆ ಕೆಲವು ವರ್ಷಗಳಿಂದ ಭಿನ್ನಾಭಿಪ್ರಾಯಗಳಿದ್ದು, ಕೆಲ ದಿನಗಳಿಂದ ಇಬ್ಬರೂ ದೂರ ಉಳಿದಿದ್ದರು. ಇದೀಗ ಡಿವೋರ್ಸ್ ಆಗಿರುವುದನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. (ಏಜೆನ್ಸೀಸ್)
ಸೂಸೈಡ್ ಪಾಡ್ ಬಳಸಿ ಸಾವಿಗೆ ಶರಣಾದ ಮಹಿಳೆ! ಇದೇ ಮೊದಲ ಕೇಸ್, ಬಟನ್ ಒತ್ತಿದ ಬೆನ್ನಲ್ಲೇ ನಡೆದಿದ್ದಿಷ್ಟು…
ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ನಟಿ ತ್ರಿಷಾ ಹೇಗಿದ್ದರು ಗೊತ್ತಾ? ಇಲ್ಲಿದೆ ನೋಡಿ ಅಪರೂಪದ ಫೋಟೋ