ಉಕ್ಕಿನ ಸೇತುವೆಗೆ ಕಾಯಕಲ್ಪ : ಬಂಟ್ವಾಳ ಪುರಸಭೆ ಸಾಮಾನ್ಯಸಭೆಯಲ್ಲಿ ಸದಸ್ಯರ ಆಗ್ರಹ

03
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಪಾಣೆಮಂಗಳೂರಿನ ಉಕ್ಕಿನ ಸೇತುವೆ 5 ವಾರ್ಡ್‌ಗಳಿಗೆ ಸಂಪರ್ಕಿಸುವ ಸೇತುವೆಯಾಗಿದ್ದು, ಇದರ ಸಾಮರ್ಥ್ಯವನ್ನು ಮತ್ತೊಮ್ಮೆ ಪರಿಶೀಲಿಸಿ ಅಭಿವೃದ್ಧಿಪಡಿಸಬೇಕು ಎಂದು ಪುರಸಭೆಯ ಸದಸ್ಯರು ಆಗ್ರಹಿಸಿದರು.

ಪುರಸಭಾಧ್ಯಕ್ಷ ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ಸೋಮವಾರ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಹಾಗೂ ಇದ್ರೀಸ್ ಪಿ.ಜೆ. ವಿಷಯ ಪ್ರಸ್ತಾಪಿಸಿದರು.

ಸದಸ್ಯ ಗೋವಿಂದ ಪ್ರಭು ಸೇತುವೆಯಲ್ಲಿ ಬೆಳೆದ ಕಳೆಗಿಡಗಳನ್ನು ತೆರವುಗೊಳಿಸುವಂತೆ ತಿಳಿಸಿದರು. ಪ್ರತಿಕ್ರಿಯಿಸಿದ ಅಧ್ಯಕ್ಷ ವಾಸು ಪೂಜಾರಿ ಎನ್‌ಐಟಿಕೆ ಸಂಸ್ಥೆಗೆ ಪತ್ರ ಬರೆಯಬೇಕು. ವರದಿ ಆಧರಿಸಿ ಅನುದಾನಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

ನೀರು ಪೂರೈಕೆಯಾಗದೆ ಬಿಲ್!

ಪಾಣೆಮಂಗಳೂರಿನ ಕೆಲವು ಮನೆಗಳಿಗೆ ನೀರು ಪೂರೈಕೆಯಾಗದಿದ್ದರೂ ಬಿಲ್ ನೀಡಲಾಗಿದೆ ಎಂದು ಸದಸ್ಯ ಇದ್ರೀಸ್ ಪಿ.ಜೆ. ಆರೋಪಿಸಿದರು. ರಾಮಕೃಷ್ಣ ಆಳ್ವ ಧ್ವನಿಗೂಡಿಸಿದರು. ನೀರೇ ಬರದಿದ್ದರೆ ಬಿಲ್ ಪಾವತಿಸುವುದು ಹೇಗೆ? ಎಂದು ಸದಸ್ಯ ಝೀನತ್ ಫಿರೋಜ್ ಆಕ್ರೋಶ ವ್ಯಕ್ತಪಡಿಸಿದರೆ, ಇದು ಹಳೆಯ ನೀರಿನ ಸಂಪರ್ಕ ಅಲ್ಲ ಬದಲಿಗೆ ಅಮತ್ ಯೋಜನೆಯಡಿ ಹಾಕಲಾದ 24್ಡ7 ಹೊಸ ನೀರಿನ ಸಂಪರ್ಕದಲ್ಲಿಯೇ ಇನ್ನೂ ನೀರು ಬರುತ್ತಿಲ್ಲ. ಈ ನೀರಿನ ಯೋಜನೆಯೇ ವಿಫಲವಾಗಿದೆ ಎಂದು ಸಿದ್ದೀಕ್ ಆರೋಪಿಸಿದರು. ಇದು 24್ಡ7 ಅಲ್ಲ ಬದಲಿಗೆ 7 ದಿನಕ್ಕೆ 24 ಗಂಟೆ ಮಾತ್ರ ನೀರು ಬರುವ ಯೋಜನೆ ಎಂದು ಉಪಾಧ್ಯಕ್ಷ ಮೂನಿಶ್ ಅಲಿ ವ್ಯಂಗ್ಯಮಾಡಿದರು. ಬಂಟ್ವಾಳ ಪುರಸಭೆಗೆ ನೀರಿನ ತೆರಿಗೆಯಿಂದ ಮಾಸಿಕ ಕೇವಲ 6.83 ಲಕ್ಷ ರೂ. ಮಾತ್ರ ಆದಾಯ ಬರುತ್ತಿರುವ ಬಗ್ಗೆ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಅಮೃತ್ ಯೋಜನೆಯನ್ನು ಅನುಷ್ಠಾನಗೊಳಿಸಿದ ಕ.ನ.ನೀ.ಸ. ಒ. ಮಂಡಳಿಯ ಅಧಿಕಾರಿಗಳ ಕರೆದು ಸಭೆ ನಡೆಸುವಂತೆ ಮುಖ್ಯಾಧಿಕಾರಿ ಮತ್ತಡಿ ಸಲಹೆ ನೀಡಿದಾಗ ಅವರನ್ನು ಸಭೆಗೆ ಕರೆಯುವುದೇ ಬೇಡ ಎಂದು ಸದಸ್ಯರೆಲ್ಲರೂ ಆಗ್ರಹಿಸಿದರು. ಈ ವಿಷಯ ಚರ್ಚಿಸಿ ಯಾವುದೇ ಪ್ರಯೋಜನವಿಲ್ಲ ಎಂದು ಸದಸ್ಯ ಮಹಮ್ಮದ್ ಶರೀಫ್ ಪ್ರತಿಕ್ರಿಯಿಸಿದರು. ಸುದೀರ್ ಚರ್ಚೆ ಬಳಿಕ ಪ್ರಕರಣವನ್ನು ಲೋಕಾಯುಕ್ತಕ್ಕೆ ನೀಡುವುದೇ ಸೂಕ್ತ ಎಂದು ಅಧ್ಯಕ್ಷರು ರೂಲಿಂಗ್ ಹೊರಡಿಸಿದರು.

ಸದಸ್ಯರಾದ ಮಹಮ್ಮದ್ ನಂದರಬೆಟ್ಟು, ವಿದ್ಯಾವತಿ, ಜೆಸಿಂತಾ ಡಿಸೋಜ ಮತ್ತಿತರರಿದ್ದರು.

ಹೆಚ್ಚುವರಿ ಡ್ರೈವರ್ ಎಲ್ಲಿಂದ ಬಂದ?

ಪುರಸಭಾ ವ್ಯಾಪ್ತಿಯ ನತ್ಯಾಜ್ಯ ವಿಲೇವಾರಿಯ ವಾಹನಗಳಿಗೆ 8 ಚಾಲಕರನ್ನು ಒದಗಿಸಿದ ಬಗ್ಗೆ ಗುತ್ತಿಗೆ ಏಜೆನ್ಸಿಗೆ 1,36,961 ರೂ. ಬಿಲ್ ಪಾವತಿಸಲಾಗಿದೆ. ಇದರ ಜತೆಗೆ ನತ್ಯಾಜ್ಯ ವಾಹನಕ್ಕೆ ಓರ್ವ ಡ್ರೈವರ್‌ನನ್ನು ಒದಗಿಸಿದ ಬಗ್ಗೆ ಅದೇ ಏಜೆನ್ಸಿಗೆ ಮತ್ತೊಮ್ಮೆ 96,614 ರೂ.ಯನ್ನು ಪಾವತಿಸಲಾಗಿದೆ. 8 ಮಂದಿ ಡ್ರೈವರ್ ಇರುವಾಗ ಈ ಹೆಚ್ಚುವರಿ ಡ್ರೈವರ್ ಬಂದಿರುವುದು ಹೇಗೆ? ಎಂದು ವಿಪಕ್ಷ ಸದಸ್ಯ ಹರಿಪ್ರಸಾದ್ ಪ್ರಶ್ನಿಸಿದರು. ಸದಸ್ಯ ಗೋವಿಂದ ಪ್ರಭು ಧ್ವನಿಗೂಡಿಸಿದರು. ಹೆಚ್ಚುವರಿ ಪೇಮೆಂಟ್ ಆಗಿಲ್ಲ. ಡಿಪಿಆರ್‌ನಲ್ಲಿ ಮಂಜೂರಾದಂತೆ ವೇತನ ನೀಡಲಾಗಿದೆ? ಎಂದು ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಸಮಜಾಯಿಷಿ ನೀಡಿದರು. ಆ ಡ್ರೈವರ್‌ನನ್ನು ಹೆಚ್ಚುವರಿಯಾಗಿ ನೇಮಕಾತಿ ಮಾಡಿದ್ದು ಯಾರು? ಈಗ ಕರ್ತವ್ಯದಿಂದ ತೆಗೆದಿರುವುದು ಯಾಕೆ? ಪ್ರತ್ಯೇಕವಾಗಿ ಓರ್ವನಿಗೆ ಸಿಂಗಲ್ ಪೇಮಂಟ್ ಆಗಿದ್ದು ಹೇಗೆ? ಎಂದು ಹರಿಪ್ರಸಾದ್ ಪಟ್ಟುಹಿಡಿದರು.

ಟೆಂಡರ್ ಕೊಟ್ಟು ಏನು ಲಾಭ?

ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನ ತ್ಯಾಜ್ಯ ಸಂಸ್ಕರಣ ಟಕದಲ್ಲಿ ಖಾಸಗಿ ಸಂಸ್ಥೆಯ ಒಪ್ಪಂದ ನವೀಕರಣದ ಬಗ್ಗೆ ಆರೋಗ್ಯಾಧಿಕಾರಿ ರತ್ನಪ್ರಸಾದ್ ವಿಷಯ ಪ್ರಸ್ತಾಪಿಸಿದಾಗ, ಒಂದು ವರ್ಷದಿಂದ ಅವರಿಗೆ ಟೆಂಡರ್ ಕೊಟ್ಟು ಏನು ಲಾಭ ಆಗಿದೆ? ಒಂದು ವರ್ಷದಲ್ಲಿ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಆದ ಬದಲಾವಣೆ ಏನು? ಎಂದು ಸದಸ್ಯ ಮಹಮ್ಮದ್ ಶರೀಫ್ ಪ್ರಶ್ನಿಸಿದರು. ಬಂಟ್ವಾಳ ಪುರಸಭೆ ಕಸಕ್ಕಿಂತ ಬೇರೆ ಭಾಗದ ಕಸವೇ ಅಲ್ಲಿ ತುಂಬಿದೆ ಎಂದು ರಾಮಕೃಷ್ಣ ಆಳ್ವ ಆರೋಪಿಸಿದರು. ಬಿ.ಸಿ.ರೋಡಿನಲ್ಲಿ ಸದ್ಯಕ್ಕೆ ಬಾಗಿಲು ಮುಚ್ಚಿರುವ ಪಿಂಕ್ ಟಾಯ್ಲೆಟನ್ನು ಪುನಾರಂಭಗೊಳಿಸುವ ಬಗ್ಗೆ ಹಾಗೂ ಪಾಣೆಮಂಗಳೂರಿನಲ್ಲಿ ಇನ್ನೂ ಉದ್ಘಾಟನೆಯಾಗದ ಸಾರ್ವಜನಿಕ ಶೌಚಗೃಹದ ಬಗ್ಗೆ ಸದಸ್ಯರು ಚರ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net