

ಹೆಬ್ರಿ: ಹೆಬ್ರಿ ತಾಲೂಕಿನ ಎಲ್ಲ ಗ್ರಾಮಗಳ ಪಹಣಿಯಲ್ಲಿ ಹೆಬ್ರಿ ತಾಲೂಕು ಹೆಬ್ರಿ ಹೋಬಳಿ ಎಂದು ತಿದ್ದುಪಡಿ ಮಾಡುವ ಪ್ರಕ್ರಿಯೆ ಭೂಮಿ ತಂತ್ರಾಂಶದಲ್ಲಿ ಪ್ರಗತಿಯಲ್ಲಿದ್ದು, 45 ದಿನಗಳು ಕಳೆದಿದೆ. ಇದರಿಂದಾಗಿ ಹೆಬ್ರಿ ತಾಲೂಕಿನ ಹೆಬ್ರಿ ಹೋಬಳಿಯ ಎಲ್ಲ ಗ್ರಾಮಗಳ ದಸ್ತಾವೇಜು ನೋಂದಣಿಗೆ ತೊಡಕಾಗಿದ್ದು, ಜನತೆಗೆ ಸಮಸ್ಯೆ ಆಗಿದೆ ಎಂದು ಹೆಬ್ರಿ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್ ಹೆಬ್ರಿ ತಾಲೂಕು ಕಚೇರಿಯಲ್ಲಿ ಶುಕ್ರವಾರ ಮನವಿ ಮಾಡಿದ್ದಾರೆ.
ಆಸ್ತಿ ನೋಂದಣಿ, ಕೃಷಿ ಸಾಲ, ಅಡಮಾನ ಪತ್ರ, ಬ್ಯಾಂಕಿಂಗ್ ಸೇವೆ, ಸರ್ವೇ, ಅಳತೆ, ನೋಂದಣಿ ಇಲಾಖೆಯ ಎಲ್ಲ ಸೇವೆಗಳಿಗೂ ಸಮಸ್ಯೆಯಾಗಿದೆ. ಕೂಡಲೇ ಸಮಸ್ಯೆ ಸರಿಪಡಿಸುವಂತೆ ಬಿಜೆಪಿ ನಿಯೋಗ ಒತ್ತಾಯಿಸಿದೆ. ಸಂಜೀವ ಶೆಟ್ಟಿ ಕೆರೆಬೆಟ್ಟು, ತಾರಾನಾಥ್ ಬಂಗೇರ, ಸುರೇಶ ಶೆಟ್ಟಿ, ರತ್ನಾಕರ್ ಪೂಜಾರಿ, ಸುರೇಶ ಭಂಡಾರಿ, ಎಚ್.ಕೆ.ಸುಧಾಕರ್, ಮಾಲತಿ, ಸುಧಾಕರ್ ಹೆಗ್ಡೆ, ಪ್ರಸನ್ನ ಶೆಟ್ಟಿ ಇದ್ದರು.
ಗ್ರಾಮೀಣ ಭಾಗದ ರೈತರಿಗೆ ಕೃಷಿ ಸಾಲ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ. ನೂರಾರು ಸಾಲದ ಅರ್ಜಿಗಳು ಸಮಸ್ಯೆಯಿಂದ ತಿರಸ್ಕೃತಗೊಂಡಿದೆ. ಇದು ರೈತಾಪಿ ವರ್ಗದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.