ಹೊಸ ಮಾರ್ಗದತ್ತ : ‘ಏಕ್ ಲವ್ ಯಾ’ ನಂತರ ಇನ್ನೊಂದು ಚಿತ್ರದಲ್ಲಿ ರೀಷ್ಮಾ

Reeshma
Published on

ಬೆಂಗಳೂರು: ಓದುತ್ತಿರುವುದು ಪತ್ರಿಕೋದ್ಯಮ. ಆದರೆ, ನಟನೆಯಲ್ಲಿ ಹೆಚ್ಚು ಆಸಕ್ತಿ. ನೋಡೋದಕ್ಕೆ ಫಾರಿನರ್ ತರಹ ಕಾಣ್ತಾರೆ. ಬಟ್ ಅಚ್ಚ ಕನ್ನಡತಿ. ಮೊದಲ ಚಿತ್ರವೇ ಬಿಡುಗಡೆಯಾಗಿಲ್ಲ. ಆಗಲೇ ಎರಡನೇ ಚಿತ್ರಕ್ಕೆ ನಾಯಕಿ. ಇದು ರೀಷ್ಮಾ ಬಯೋಡೇಟದ ಆಯ್ದ ಅಂಶಗಳು.

ಸೈಕಲ್ ಹೊಡೀಲಿಲ್ಲ ‘ನಾನು ‘ಏಕ್ ಲವ್ ಯಾ’ ಚಿತ್ರಕ್ಕೆ ಆಯ್ಕೆ ಆದಾಗ ಭಯವಿತ್ತು. ಆದರೆ, ಪ್ರೇಮ್ ಅವರು ವರ್ಕ್​ಶಾಪ್ ಮಾಡಿಸಿದರು. ಸಾಕಷ್ಟು ಹೋಂವರ್ಕ್ ಮಾಡಿದ್ದರಿಂದ, ಬಹಳ ಸುಲಭ ಆಯ್ತು. ಸ್ವಲ್ಪವೂ ಸೈಕಲ್ ಹೊಡೆಯದೆ ನಟಿಸಿದೆ. ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. ಒಂದೂವರೆ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ’ ಎಂದು ಮಾಹಿತಿ ಕೊಡುತ್ತಾರೆ ರೀಷ್ಮಾ.

ಮೊದಲಿಗೆ ಅವರ ಹೆಸರು ರೀಷ್ಮಾನೋ, ಗ್ರೀಷ್ಮಾನೋ ಎಂಬ ಪ್ರಶ್ನೆ ಬರುವುದು ಸಹಜ. ‘ಐ ಆಮ್ ರೀಷ್ಮಾ, ರೀಷ್ಮಾ ನಾಣಯ್ಯ’ ಎಂದು ಅವರು ಪರಿಚಯಿಸಿಕೊಳ್ಳುವ ಅವರು, ಮೂಲತಃ ಕೊಡಗಿನವರು. ಆದರೆ, ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿ. ಮೊದಲಿನಿಂದಲೂ ನಟನೆ, ನೃತ್ಯದ ಬಗ್ಗೆ ಆಸಕ್ತಿ ಇದ್ದ ರೀಷ್ಮಾ, ಕಳೆದ ವರ್ಷ ‘ಫ್ರೆಶ್ ಫೇಸ್’ ಸ್ಪರ್ಧೆಯಲ್ಲಿ ಗೆದ್ದರಂತೆ.

ಈ ಮಧ್ಯೆ, ‘ಏಕ್ ಲವ್ ಯಾ’ ಚಿತ್ರಕ್ಕೆ ನಾಯಕಿಗಾಗಿ ಹುಡುಕುತ್ತಿದ್ದ ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ೆ ಯಾರೋ ರೀಷ್ಮಾ ಹೆಸರು ಹೇಳಿದ್ದಾರೆ. ಹೀಗೆ ‘ಏಕ್ ಲವ್ ಯಾ’ ಚಿತ್ರಕ್ಕೆ ನಾಯಕಿಯಾದ ರೀಷ್ಮಾ, ಅದು ಬಿಡುಗಡೆಯಾಗುವ ಮುನ್ನವೇ ‘ಆ ದಿನಗಳು’ ಚೇತನ್ ಅಭಿನಯದ ‘ಮಾರ್ಗ’ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ.

ಕಣ್ಸಳೆಯುವ ಪಾತ್ರ: ಇನ್ನು ‘ಮಾರ್ಗ’ ಚಿತ್ರದಲ್ಲಿ ರೀಮಾ ಎಂಬ ಪಾತ್ರ ಮಾಡುತ್ತಿರುವ ರೀಷ್ಮಾ, ‘ಅದೊಂದು ಬಹಳ ವಿಭಿನ್ನವಾದ ಪಾತ್ರ. ಎಲ್ಲರ ಕಣ್ಸೆಳೆಯುವ ಪಾತ್ರ. ಚಿತ್ರದಿಂದ ಚಿತ್ರಕ್ಕೆ ವಿಭಿನ್ನವಾದ ಪಾತ್ರ ಮಾಡಬೇಕು, ಬೆಳೆಯಬೇಕು, ಒಬ್ಬ ನಟ ಅಥವಾ ನಟಿ ಎಂದರೆ ಯೂನಿಕ್ ಆಗಿರಬೇಕು ಎನ್ನುವ ಆಸೆ ನನ್ನದು. ಅದಕ್ಕೆ ಸರಿಯಾಗಿ ಎರಡೂ ಚಿತ್ರಗಳಲ್ಲಿ ಬೇರೆಬೇರೆ ಪಾತ್ರಗಳು ಸಿಕ್ಕಿವೆ’ ಎನ್ನುತ್ತಾರೆ ರೀಷ್ಮಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net