

ಲಾಕ್ಡೌನ್ ಶುರುವಾದ ಮೇಲಿಂದ ಸಾಲು ಸಾಲು ಸಿನಿಮಾಗಳು ಓಟಿಟಿ ವೇದಿಕೆ ಏರಿ ಬಿಡುಗಡೆಯಾಗುತ್ತಿವೆ. ಈಗಾಗಲೇ ಸಾಕಷ್ಟು ಸಿನಿಮಾ ತೆರಕಂಡಿವೆ. ಸಣ್ಣ ಸಣ್ಣ ಸಿನಿಮಾಗಳಷ್ಟೇ ಅಲ್ಲದೆ, ಸ್ಟಾರ್ ಕಲಾವಿದರ ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆಯಾಗಲು ಸಾಲುಗಟ್ಟಿ ನಿಂತಿವೆ. ಇದೀಗ ಕಾಲಿವುಡ್ ನಟ ಧನುಷ್ ಸಹ ಅತ್ತ ಮುಖ ಮಾಡಿದ್ದಾರೆ.
ಅಂದರೆ, ಧನುಷ್ ಮುಖ್ಯಭೂಮಿಕೆ ನಿಭಾಯಿಸಿರುವ ಜಗಮೇ ತಂಧಿರಮ್ ಸಿನಿಮಾ ದೀಪಾವಳಿ ಪ್ರಯುಕ್ತ ಬಿಡುಗಡೆ ಆಗಲಿದೆಯಂತೆ. ಕಾರ್ತಿಕ್ ಸುಬ್ಬರಾಜು ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಈಗಾಗಲೇ ಬಹುತೇಕ ಕೆಲಸಗಳನ್ನು ಮುಗಿಸಿಕೊಂಡಿದೆ. ಈಗಾಗಲೇ ಸಿನಿಮಾ ಚಿತ್ರೀಕರಣಕ್ಕೂ ಸರ್ಕಾರಗಳು ಅವಕಾಶ ಕೊಟ್ಟಿದ್ದರಿಂದ ಬಾಕಿ ಉಳಿದ ಶೂಟಿಂಗ್ ಮುಗಿಸಿಕೊಂಡು ಇನ್ನೇನು ಬಿಡುಗಡೆಯತ್ತ ಚಿತ್ತ ಹರಿಸಲಿದೆ.
ದೀಪಾವಳಿ ವೇಳೆಗೆ ಚಿತ್ರಮಂದಿರ ತೆರೆದರೆ, ಎಂದಿನಂತೆ ಚಿತ್ರಮಂದಿರದಲ್ಲಿಯೇ ಸಿನಿಮಾ ಕಣ್ತುಂಬಿಕೊಳ್ಳಬಹುದು. ಆದರೆ, ಈವರೆಗೂ ಸಿನಿಮಾ ಥಿಯೇಟರ್ ಯಾವಾಗ ಬಿಡುಗಡೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ಈಗಾಗಲೇ ಕಾಲಿವುಡ್ನಲ್ಲಿ ಸೂರ್ಯ ಸೇರಿ ಹಲವು ಸ್ಟಾರ್ ನಟರ ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿವೆ. ಆ ಸಾಲಿಗೆ ಧನುಷ್ ಸಹ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. (ಏಜೆನ್ಸೀಸ್)