ಅಪ್ಪನ ಚಿತ್ರಗಳ ಸಹವಾಸವೇ ಬೇಡ ಅಂತಿದ್ದಾರೆ ರಾಮ್​ಚರಣ್​ ತೇಜ

Ramcharan Teja - Chiranjeevi
Published on

ನಟನೆಯ ಜತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ಟಾಲಿವುಡ್​ ನಟ ಮೆಗಾಸ್ಟಾರ್​ ಚಿರಂಜೀವಿ ಅವರ ಮಗ ರಾಮ್​ಚರಣ್​ ತೇಜ ಇನ್ನು ಮುಂದೆ ನಿರ್ಮಾಣದ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರಂತೆ.

ರಾಮ್​ಚರಣ್​ ಚಿಕ್ಕವಯಸ್ಸಿನಲ್ಲೇ ನಟನೆ ಮತ್ತು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು, ಒಂದಿಷ್ಟು ದುಡ್ಡು ಸಹ ಮಾಡಿದ್ದರು. ಹೀಗಿರುವಾಗ, ಯಾಕೆ ಅವರು ನಿರ್ಮಾಣದಿಂದ ಇಷ್ಟು ಬೇಗ ವಿಮುಖರಾಗುತ್ತಿದ್ದಾರೆ ಎಂಬ ಪ್ರಶ್ನೆ ಬರುವುದು ಸಹಜ. ಅದಕ್ಕೆ ಉತ್ತರವೂ ಇದೆ.

ಪ್ರಮುಖವಾಗಿ, ರಾಮ್​ಚರಣ್​ ತೇಜ ಇದುವರೆಗೂ ನಿರ್ಮಿಸಿರುವುದು ಚಿರಂಜೀವಿ ಅವರ ಚಿತ್ರಗಳನ್ನೇ. ಮೊದಲ ಚಿತ್ರ 'ಖೈದಿ ನಂ 150' ಅಷ್ಟೇನೂ ಯಶಸ್ವಿಯಾಗಲಿಲ್ಲ. ನಂತರ ಬಿಡುಗಡೆಯಾದ 'ಸೈರಾ ನರಸಿಂಹ ರೆಡ್ಡಿ', ಒಂದಿಷ್ಟು ದುಡ್ಡ ಮಾಡಿತಾದರೂ ಅಂದುಕೊಂಡಷ್ಟು ಲಾಭ ಬರಲಿಲ್ಲವಂತೆ. ಇನ್ನು 'ಆಚಾರ್ಯ' ಚಿತ್ರವು ಶುರುವಾಗಿದೆಯಾದರೂ, ಕರೊನಾ ಹಾವಳಿಯಿಂದ ಮುಂದುವರೆಯುತ್ತಲೇ ಇಲ್ಲ.

ಹೀಗೆ ಮೂರು ಚಿತ್ರಗಳನ್ನು ನಿರ್ಮಿಸಿರುವ ರಾಮ್​ಚರಣ್​ ತೇಜ, ಮೂರರಿಂದಲೂ ಸಂತೋಷ ಹಾಗೂ ನೆಮ್ಮದಿ ಕಾಣಲಿಲ್ಲವಂತೆ. ಇನ್ನೊಂದು ಕಡೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವುದರಿಂದ, ಆ ಕಡೆ ನಟನೆಯಲ್ಲೂ ಸರಿಯಾಗಿ ತೊಡಗಿಸಿಕೊಳ್ಳಲಾಗುತ್ತಿಲ್ಲ. ನಟನೆ ಕಡೆ ಹೋದರೆ, ನಿರ್ಮಾಣದಲ್ಲಿ ಮುಂದುವರೆಯುವುದು ಕಷ್ಟವಾಗುತ್ತದೆ.

ಅದೇ ಕಾರಣಕ್ಕೆ, 'ಆಚಾರ್ಯ' ಚಿತ್ರದ ನಂತರ ಚಿತ್ರ ನಿರ್ಮಾಣ ಸದ್ಯ ಬೇಡ ಎಂಬ ತೀರ್ಮಾನಕ್ಕೆ ರಾಮ್​ಚರಣ್​ ತೇಜ ಬಂದಿದ್ದಾರೆ ಎನ್ನಲಾಗಿದೆ. ಚಿತ್ರ ನಿರ್ಮಾಣದ ಬದಲು ಪೂರ್ಣಪ್ರಮಾಣದಲ್ಲಿ ನಟನೆಯಲ್ಲೇ ತೊಡಗಿಸಿಕೊಳ್ಳುವುದು ಉತ್ತಮ ಎಂಬ ತೀರ್ಮಾನಕ್ಕೆ ಅವರು ಬಂದಿದ್ದು, ಅದರಂತೆ 'ಆಚಾರ್ಯ' ನಂತರ ಚಿತ್ರ ನಿರ್ಮಾಣ ಪಕ್ಕಕ್ಕಿಟ್ಟು, ಒಂದಿಷ್ಟು ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.

ಈ ಮಧ್ಯೆ, ಚಿರಂಜೀವಿ ಅವರ ಮುಂದಿನ ಚಿತ್ರಗಳನ್ನು ಮೈತ್ರಿ ಮೂವಿ ಮೇಕರ್ಸ್​ ಸೇರಿದಂತೆ ಬೇರೆ ನಿರ್ಮಾಣ ಸಂಸ್ಥೆಗಳು ನಿರ್ಮಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net