Real Hero : ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮತ್ತೊಬ್ಬರ ಜೀವ ರಕ್ಷಣೆ ಮಾಡುವುದೆಂದರೆ ಸುಲಭದ ಮಾತಲ್ಲ. ಇಂತಹ ಸಾಹಸಕ್ಕೆ ಕೈಹಾಕಲು ಡಬ್ಬಲ್ ಗುಂಡಿಗೆ ಇರಬೇಕು. ಅಷ್ಟೇ ಅಲ್ಲ ಮಾನವೀಯತೆಯೂ ಇರಬೇಕು. ಯಾರು ಸತ್ತರೇನು ನಾನು ಚೆನ್ನಾಗಿದ್ದರೆ ಸಾಕು ಅನ್ನೋರೆ ಇಂದು ಜಾಸ್ತಿ. ಅಲ್ಲದೆ, ಇನ್ನೊಬ್ಬರು ತೊಂದರೆಯಲ್ಲಿರುವಾಗ ಪ್ರೇಕ್ಷಕನಾಗಿ ನಿಂತು ನೋಡುವವರೇ ಹೆಚ್ಚು. ಆದರೆ, ಇಲ್ಲೊಬ್ಬ ವ್ಯಕ್ತಿ ಮಾಡಿದ ಸಾಹಸಕ್ಕೆ ಎಲ್ಲರೂ ತಲೆಬಾಗಿದ್ದಾರೆ. ಆತನ ಧೈರ್ಯವನ್ನು ಕೊಂಡಾಡುತ್ತಿದ್ದಾರೆ.

ಹೌದು, ಚೆನ್ನೈ ಮೂಲದ ಯುವಕ ಕಣ್ಣನ್, ವಿದ್ಯುತ್ ಶಾಕ್ಗೆ ಒಳಗಾದ ಒಂಬತ್ತು ವರ್ಷದ ಬಾಲಕನನ್ನು ರಕ್ಷಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕಣ್ಣನ್ ಅವರನ್ನು ನಿಜವಾದ ಹೀರೋ ಎಂದು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ನನ್ನ ಹೆಸರು ಕಣ್ಣನ್ ತಮಿಳ್ಸೆಲ್ವನ್. ಬುಧವಾರ ಮಧ್ಯಾಹ್ನ ನಾನು ಕೆಲಸಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದೆ. ಆ ದಿನ ಭಾರೀ ಮಳೆಯಾಗಿತ್ತು. ಅರುಂಬಕ್ಕಂ ಪ್ರದೇಶದ ರಸ್ತೆಗಳು ಜಲಾವೃತವಾಗಿದ್ದವು. ನಾನು ನೋಡಿದಾಗ ಒಂದು ಮಗು ನೀರಿಗೆ ಬಿದ್ದಿತು. ಬಹುಶಃ ಆತ ಆಯ ತಪ್ಪಿ ಕೆಳಗೆ ಬಿದ್ದಿರಬಹುದು ಎಂದು ಭಾವಿಸಿದೆ. ಸಹಾಯ ಮಾಡಲು ನಾನು ಹತ್ತಿರ ಹೋದಾಗ ಆತ ಶಾಕ್ನಿಂದ ಒದ್ದಾಡುತ್ತಿರುವುದು ನನಗೆ ಗೊತ್ತಾಯಿತು. ಬಳಿಕ ನಾನು ಸಹಾಯಕ್ಕಾಗಿ ಕಿರುಚಿದೆ. ಆದರೆ, ಯಾರೂ ಮುಂದೆ ಬರಲಿಲ್ಲ. ಹತ್ತಿರ ಹೋಗಿ ಆತನನ್ನು ಮುಟ್ಟಿದಾಗ ನನಗೆ ಶಾಕ್ ಹೊಡೆಯಿತು. ತಡಮಾಡದೆ, ನಾನು ಅವನನ್ನು ಹೊರಗೆಡೆ ಎಳೆದುಕೊಂಡು, ಪಕ್ಕಕ್ಕೆ ಕರೆದೊಯ್ದು ಅವನ ಎದೆಯ ಮೇಲೆ ಬಲವಾಗಿ ಒತ್ತಿದೆ. ಆತ ಮತ್ತೆ ಉಸಿರಾಡುವುದನ್ನು ನೋಡಿ, ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ದೆ ಎಂದು ಕಣ್ಣನ್ ಹೇಳಿದರು.
ಬಾಲಕನ ಹೆಸರು ಜೇಡನ್. ಸದ್ಯ ಆತ ಚೇತರಿಸಿಕೊಂಡಿದ್ದಾನೆ ಮತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಈ ಘಟನೆ ಸ್ಥಳೀಯ ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ. ವಿದ್ಯುತ್ ಶಾಕ್ನಿಂದ ಬಾಲಕ ನೀರಿನಲ್ಲಿ ಕುಸಿದು ಬಿದ್ದು, ನರಳಾಡುತ್ತಿರುವುದನ್ನು ಗಮನಿಸಿದ ಕಣ್ಣನ್, ಆತನ ಹತ್ತಿರ ಹೋಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಣೆ ಮಾಡಿದ್ದಾರೆ. ಸ್ವಲ್ಪ ತಡವಾಗಿದ್ದರೂ ಆ ಮಗು ಸಾಯುತ್ತಿತ್ತು. ವಿಡಿಯೋ ವೈರಲ್ ಆದ ನಂತರ, ನೆಟ್ಟಿಗರು ಕಣ್ಣನ್ ಅವರನ್ನು ಹೊಗಳುತ್ತಿದ್ದಾರೆ. ಆತನನ್ನು ‘ನಿಜವಾದ ಹೀರೋ’ ಎಂದು ಕೊಂಡಾಡುತ್ತಿದ್ದಾರೆ.
#Kannan is the young man who bravely saved a boy who was drowning in the water due to an electric shock. He is the young man who risked his life to save the boy.⛑️
He is a true hero. An inspiration to all.🫡
Everyone should admire him.🫡#Chennai #Tamilnadu pic.twitter.com/PopgnYDUGp— Shashi Kumar Reddy Vura (@vurashashi) April 20, 2025
ಜೇಡನ್ ತಂದೆ ರಾಬರ್ಟ್ ಖಾಸಗಿ ಉದ್ಯೋಗಿ. ಅವರು ಅರುಂಬಕ್ಕಂನ ಮಂಗ್ಲಿ ನಗರದಲ್ಲಿ ವಾಸಿಸುತ್ತಿದ್ದಾರೆ. ಆ ದಿನ ಜೇಡನ್ ಆರೋಗ್ಯವಾಗಿರಲಿಲ್ಲ. ಆದರೆ, ವಾರ್ಷಿಕ ಪರೀಕ್ಷೆಗಳಿದ್ದ ಕಾರಣ ಶಾಲೆಗೆ ಕಳುಹಿಸಲಾಯಿತು. ಪರೀಕ್ಷೆಗಳನ್ನು ಬರೆದ ನಂತರ ಜೇಡನ್ ಒಬ್ಬಂಟಿಯಾಗಿ ಮನೆಗೆ ಹಿಂತಿರುಗಿದರು. ಇದರ ನಡುವೆ ವಿದ್ಯುತ್ ಶಾಕ್ಗೆ ಒಳಗಾದನು ಎಂದು ಅವರ ತಂದೆ ರಾಬರ್ಟ್ ಹೇಳಿದ್ದಾರೆ. ಜೇಡನ್ ಬಳಿಯಿದ್ದ ಗುರುತಿನ ಚೀಟಿಯಲ್ಲಿನ ಮೊಬೈಲ್ ನಂಬರ್ ನೋಡಿದ ಕಣ್ಣನ್, ಆತನ ತಂದೆಗೆ ಕರೆ ಮಾಡಿ ಮಾಹಿತಿ ತಿಳಿಸಿದರು. ಮಗನ ಜೀವವನ್ನು ಉಳಿಸಿದ್ದಕ್ಕಾಗಿ ಕಣ್ಣನ್ ಅವರಿಗೆ ಜೀವನದುದ್ದಕ್ಕೂ ಅವರಿಗೆ ಋಣಿಯಾಗಿರುತ್ತಾನೆ ಎಂದು ರಾಬರ್ಟ್ ಹೇಳಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಅರುಂಬಕ್ಕಂ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಭೂಗತ ಕೇಬಲ್ ಹಾನಿಗೊಳಗಾಗಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ವಿವರಿಸಿದರು. (ಏಜೆನ್ಸೀಸ್)
ಮಂಗಳನ ಅಂಗಳದಲ್ಲಿ ಏಲಿಯನ್!? ನಾಸಾ ನೋಡಿದ್ದೇನು? ಇಲ್ಲಿದೆ ನೋಡಿ ಕೆಂಪು ಗ್ರಹದ ಅಚ್ಚರಿಯ ಸಂಗತಿ! Alien