

ಬೆಂಗಳೂರು: ಶಶಿಕುಮಾರ್ ಕನ್ನಡ ಚಿತ್ರರಂಗ ಕಂಡಂತಹ ಸುರದ್ರೂಪಿ ನಟ. 90ರ ದಶಕದ ಹೊಸ್ತಿಲಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ತಮ್ಮ ನಟನೆ ಮತ್ತು ಡ್ಯಾನ್ಸ್ನಿಂದಲೇ ಜನಮನ್ನಣೆ ಗಳಿಸಿ ಬಹುಬೇಗನೇ ಯಶಸ್ಸಿನ ಶಿಖರವೇರಿದ ಶಶಿಕುಮಾರ್ ಅವರಿಗೆ 90 ದಶಕದ ಮಧ್ಯದಲ್ಲಿಯೇ ಸಂಭವಿಸಿದ ಭೀಕರ ಅಪಘಾತ ಅವರ ಸಿನಿ ಬದುಕಿಗೆ ಬರಸಿಡಿಲು ಬಡಿದಂತಾಯಿತು.
ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಅಪಘಾತ
ಅಪಘಾತವಾದ ಬಳಿಕ ಮುಖಕ್ಕೆ ಸರ್ಜರಿ ಮಾಡಿಸಿಕೊಂಡರು. ಅದರಿಂದ ಅವರ ಮುಖದ ಸ್ವರೂಪವೇ ಬದಲಾಯಿತು. 2 ರಿಂದ ಮೂರು ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಪ್ರವೇಶ ನೀಡಿದರಾದರೂ ಆ ಬಳಿಕ ಶಶಿಕುಮಾರ್ ಅವರಿಗೆ ನಿರೀಕ್ಷಿತ ಯಶಸ್ಸು ದೊರೆಯಲಿಲ್ಲ. ಇನ್ನು ಶಶಿಕುಮಾರ್ ಅವರ ಅಪಘಾತ ಕುರಿತು ಆ ಕಾಲದಲ್ಲೇ ನಾನಾ ಊಹಾಪೋಹಗಳು ಹರಿದಾಡತೊಡಗಿದವು. ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಅಪಘಾತ ಸಂಭವಿಸಿದ್ದು ವದಂತಿಗಳಿಗೆ ಕಾರಣವಾಗಿತ್ತು.
ಶಶಿಕುಮಾರ್ ಹೇಳಿದ್ದೇನು?
ಆದರೆ, ಸ್ವತಃ ಶಶಿಕುಮಾರ್ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಶೂಟಿಂಗ್ ಮುಗಿಸಿ ಬರುವಾಗ ಮಗಳಿಗೆ ಐಸ್ಕ್ರೀಂ ತೆಗೆದುಕೊಳ್ಳಲು ಬರುವಾಗ ಅಪಘಾತ ಸಂಭವಿಸಿತ್ತು ಎಂದು ಹೇಳಿದ್ದರು. ಅಪಘಾತ ಸಂಭವಿಸಿದ ಮಾರನೇ ದಿನವೂ ಪತ್ರಿಕೆಗಳಲ್ಲಿ ಇದೇ ವರದಿಯಾಗಿತ್ತು. ಆದರೆ, ಇಷ್ಟು ದಿನ ಶಶಿಕುಮಾರ್ ಹೇಳಿದ್ದು ಸುಳ್ಳಾ? ಎಂಬ ಅನುಮಾನ ಮೂಡತೊಡಗಿದೆ. ಅದಕ್ಕೆ ಕಾರಣ ಲೇಖಕರು ಹಾಗೂ ಹಿರಿಯ ಸಿನಿಮಾ ಪತ್ರಕರ್ತರಾದ ಗಣೇಶ್ ಕಾಸರಗೋಡು ಅವರು ಅಪ್ಲೋಡ್ ಮಾಡಿರುವ ಯೂಟ್ಯೂಬ್ ವಿಡಿಯೋ.
ಸುಳ್ಳನ್ನು ಪದೇಪದೆ ಹೇಳಿದರೆ ಅದು ಸತ್ಯವಾಗಿ ಬಿಡುತ್ತದೆ
ಗಣೇಶ್ ಕಾಸರಗೋಡು ಅವರು ತಮ್ಮ "ಕನ್ನಡ ಮಾಣಿಕ್ಯ" ಹೆಸರಿನ ಯೂಟ್ಯೂಬ್ ಚಾನಲ್ ಮೂಲಕ ಶಶಿಕುಮಾರ್ ಅವರ ಅಪಘಾತ ಹಿಂದಿನ ಅಸಲಿ ಕಾರಣ ಏನೆಂಬುದನ್ನು ಬಿಚ್ಚಿಟ್ಟಿದ್ದಾರೆ. ಗಣೇಶ್ ಅವರು ಒಂದು ಕಾಲದಲ್ಲಿ ಶಶಿಕುಮಾರ್ ಅವರ ಸ್ನೇಹಿತರಾಗಿದ್ದರು. ಸುಳ್ಳನ್ನು ಪದೇಪದೆ ಹೇಳಿದರೆ ಅದು ಸತ್ಯವಾಗಿ ಬಿಡುತ್ತದೆ. ನೀನು ಹೇಳಿದ ಒಂದು ಸುಳ್ಳನ್ನು ಸುಳ್ಳು ಎಂದು ಹೇಳುತ್ತೇನೆ. ಅದು ಕೂಡ ನೀನು ಅಪಘಾತದ ಕುರಿತು ಹೇಳಿದ ಸುಳ್ಳು ಅದನ್ನು ಸ್ವೀಕರಿಸು ಗೆಳೆಯ ಎಂದು ವಿಡಿಯೋ ಆರಂಭದಲ್ಲಿ ಗಣೇಶ್ ಕಾಸರಗೋಡು ಹೇಳಿದ್ದಾರೆ.
ರಮ್ಮಿನ ವಾಸನೆ ಮೂಗಿಗೆ ಬಡಿಯಿತು
ಅಂದು ಮುಂಜಾನೆ ಎದ್ದು ನಾನು ನೇರವಾಗಿ ಹೋಗಿದ್ದು ಅಪಘಾತವಾಗಿ ನೀನು ಮಲಗಿದ್ದ ಆಸ್ಪತ್ರೆಗೆ. ರಿಸೆಪ್ಸನ್ನಲ್ಲಿ ವಿಚಾರಿಸಿ, ನೀನು ಮಲಗಿರುವ ಕೋಣೆಗೆ ಬಂದೆ ಘಮ್ ಅಂತಾ ರಮ್ಮಿನ ವಾಸನೆ ಮೂಗಿಗೆ ಬಡಿಯಿತು. ಕೆಟ್ಟ ವಾಸನೆ ಅದು. ನೀನು ಬೆಡ್ ಮೇಲೆ ನರಳುತ್ತಿದ್ದೆ. ಮುಖದಲ್ಲಿ ಅಲ್ಲಿ, ಇಲ್ಲಿ ಪ್ಲಾಸ್ಟರ್ ಥರಾ ಏನೋ ಅಂಟಿಸಿದ್ದರು. ನೀನು ನನ್ನನ್ನು ನೋಡಿ ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸಿದೆ. ನಾನು ತಡೆದಾಗ ನನ್ನ ಕೈಗಳನ್ನು ಹಿಡಿದು ಗೊಳೋ ಅಂಥಾ ಅಳಲು ಆರಂಭಿಸಿದೆ. ಆಗಲೇ ಗೊತ್ತಾಗಿದ್ದು, ಅಪಘಾತದಲ್ಲಿ ನಿನ್ನ ಮುಖದ ಸ್ವರೂಪವೇ ಬದಲಾಗಿದೆ ಎಂದು. ನಿನಗೆ ಅಮಲು ಇನ್ನು ಇಳಿದಿರಲಿಲ್ಲ. ತೊದಲು ಮಾತನಾಡುತ್ತಿದ್ದೆ. ಏನಾಯಿತು ಗೆಳೆಯ ಎಂದು ರಮ್ಮಿನ ಕೆಟ್ಟ ದುರ್ವಾಸನೆ ಸಹಿಸಿಕೊಂಡೆ ಕೇಳಿದೆ.
ಏನಾಗಿ ಹೋಯ್ತು ನೋಡು ಗೆಳೆಯಾ...
ನಿನ್ನೆ ರಾತ್ರಿ ಸ್ವಲ್ಪ ಹೆಚ್ಚೇ ಕುಡಿದು ಬಿಟ್ಟಿದ್ದೆ. ಎಲ್ಲಿಂದ ಹೊರಟನೋ? ಎಲ್ಲಿಗೆ ಬಂದು ತಲುಪಿಸದ್ದೆನೋ? ಗೊತ್ತಿಲ್ಲ. ಗುಂಡು ಹಾಕಿ ಕಾರು ಹತ್ತಿದ್ದಷ್ಟೇ ಗೊತ್ತು. ಶಿವಾನಂದಾ ಸ್ಟೋರ್ಸ್ ಹತ್ತಿರ ಬರುತ್ತಿದ್ದಂತೆಯೇ ಕಂಟ್ರೋಲ್ ತಪ್ಪಿತು. ಎಲ್ಲ ಎರಡೆರಡು ಕಾಣ ತೊಡಗಿತು. ಸ್ಟೇರಿಂಗ್ ತಿರುಗಿಸಿದ್ದಷ್ಟೇ ಗೊತ್ತು. ಕಾರು ಡಿವೈಡರ್ಗೆ ಬಡಿದು ಆ ಕಡೆಯ ಪುಟ್ಬಾತ್ ಏರಿ ನಿಂತಿತು. ಅಷ್ಟರಲ್ಲಿ ಸ್ಟೇರಿಂಗ್ ಮುಖಕ್ಕೆ ಬಡಿದಿತ್ತು. ಆ ಮೇಲೆ ಏನಾಯಿತು ಗೊತ್ತಿಲ್ಲ. ಎಚ್ಚರವಾದಾಗ ಆಸ್ಪತ್ರೆ ಬೆಡ್ ಮೇಲೆ ಮಲಗಿದ್ದೆ. ನೋಡು ಗೆಳೆಯಾ. ಏನಾಗಿ ಹೋಯ್ತು ನೋಡು ಎಂದು ನಿನ್ನ ಕೆಳ ಗದ್ದವನ್ನು ಅಲ್ಲಾಡಿಸಿದೆ. ಬಿರುಕು ಬಿಟ್ಟ ಗದ್ದ ಜೋತಾಡುತ್ತಿತ್ತು. ನನಗೆ ನೋಡಲಾಗಲಿಲ್ಲ ಎಂದು ಗಣೇಶ್ ವಿವರಿಸುತ್ತಾ ಹೋಗಿದ್ದಾರೆ.
ರೂಪವೇ ನನ್ನ ಆಸ್ತಿ
ಕನ್ನಡ ಚಿತ್ರರಂಗದಲ್ಲಿ ನಾನೊಬ್ಬ ಚೆಂದದ ನಟ ಎಂದು ಎಲ್ಲರು ಗುರುತಿಸುತ್ತಿದ್ದರು. ಚೆನ್ನಾಗಿ ಡ್ಯಾನ್ಸ್ ಸಹ ಮಾಡುತ್ತಿದ್ದೆ. ಹೀಗಾಗಿ ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದವು. ಎಲ್ಲವೂ ಸರಿಯಾಗೇ ಇತ್ತು. ಅಷ್ಟರಲ್ಲಿ ಏನಾಯ್ತು ನೋಡು ಗೆಳೆಯಾ, ಆಪರೇಷನ್ ಆದ ನಂತರವಾದರೂ ನನ್ನ ರೂಪ ಮೊದಲಿನಂತಾಗುವುದೇ? ರೂಪವೇ ನನ್ನ ಆಸ್ತಿ. ಅದಿಲ್ಲದ ನನ್ನನ್ನು ಈ ರಂಗದಲ್ಲಿ ಯಾರು ಹತ್ತಿರ ಸೇರಿಸುತ್ತಾರೆ ಎಂದು ಶಶಿಕುಮಾರ್ ಕೇಳಿದ್ದಾಗಿ ಗಣೇಶ್ ಕಾಸರಗೋಡ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ನೀನು ಹೇಳಿದ ಸುಳ್ಳು ನಿನ್ನ ಭವಿಷ್ಯವನ್ನು ಕಾಪಡಲಿಲ್ಲ
ಆದರೆ, ಮಾರನೇ ದಿನ ಪತ್ರಿಕೆಯಲ್ಲಿ ಅಪಘಾತದ ಸುದ್ದಿ ಪ್ರಕಟವಾಗಿತ್ತು. ರಾತ್ರಿ ಯಾವುದೋ ಹೊತ್ತಿನಲ್ಲಿ ಮಗು ಐಸ್ಕ್ರೀಂಗೆ ಪೀಡಿಸಿದಾಗ ಕಾರು ಡ್ರೈವ್ ಮಾಡುತ್ತಾ ಶಿವಾನಂದಾ ಸರ್ಕಲ್ಗೆ ಬರುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ವಾಹನವನ್ನು ತಪ್ಪಿಸುವ ಪ್ರಯತ್ನದಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು ಎಂದು ನೀನೆ ಹೇಳಿರುವ ಸುದ್ದಿ ಪ್ರಕಟವಾಗಿತ್ತು. ನನಗೆ ನಗು ಬಂತು. ನೀನು ಹಾಗೇ ಹೇಳಲೇ ಬೇಕಿತ್ತು. ಆದರೂ, ನೀನು ಹೇಳಿದ ಸುಳ್ಳು ನಿನ್ನ ಭವಿಷ್ಯವನ್ನು ಕಾಪಡಲಿಲ್ಲ ಎಂದು ಗಣೇಶ್ ಕಾಸರಗೋಡು ವಿಡಿಯೋದಲ್ಲಿ ಹೇಳಿದ್ದಾರೆ.
ವಿಡಿಯೋ ಕುರಿತು ಆಕ್ರೋಶ
ಇನ್ನು ಗಣೇಶ್ ಕಾಸರಗೋಡು ಅವರ ವಿಡಿಯೋ ಕುರಿತು ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಶಶಿಕುಮಾರ್ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾರೆಂದು ಅನೇಕರು ಕಿಡಿಕಾರಿದ್ದಾರೆ. ಈ ವಿಚಾರ ಈಗ ಅವಶ್ಯ ಇರಲಿಲ್ಲ ಎಂದು ಇನ್ನು ಕೆಲವರು ಹೇಳಿದ್ದಾರೆ. ಇನ್ನು ಈ ಬಗ್ಗೆ ಶಶಿಕುಮಾರ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.