

ಕೊಚ್ಚಿ: ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ 2017ರ ಕೇಸನ್ನು ಈಗಿನ ವಿಚಾರಣಾ ಕೋರ್ಟ್ನಿಂದ ಬೇರೆ ಕೋರ್ಟ್ಗೆ ಬದಲಾಯಿಸುವಂತೆ ಆರೋಪಿ ನಟ ದಿಲೀಪ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ದಿಲೀಪ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ವಿ.ಜಿ.ಅರುಣ್, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಿ, ಅಪರಾಧಿ ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ಆಗುತ್ತಿದೆ ಎಂಬುದು ಗಮನಕ್ಕೆ ಬಂದರೆ ಇಂತಹ ಅರ್ಜಿಯನ್ನು ಪುರಸ್ಕರಿಸಬಹುದು. ಆದರೆ ಈಗ ಅಂತಹ ಸನ್ನಿವೇಶವಿಲ್ಲ. ನಿಜಾಂಶ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆ ಆಗುವುದೆಂಬ ಭರವಸೆ ನ್ಯಾಯಾಲಯಕ್ಕೆ ಇದೆ. ಆದ್ದರಿಂದ ಈ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ಹೇಳಿದರು.
ಈ ತಿಂಗಳ ಆರಂಭದಲ್ಲೇ ಹೈಕೋರ್ಟ್ ಈ ಅರ್ಜಿ ಬಂದ ಕೂಡಲೇ ಇನ್ ಕ್ಯಾಮರಾ ವಿಚಾರಣೆ ನಡೆಸುವಂತೆ ಸಿಬಿಐ ವಿಶೇಷ ಕೋರ್ಟ್ (ಸಿಬಿಐ ವಿಶೇಷ ಕೋರ್ಟ್ ಜಡ್ಜ್ 3-ಎರ್ನಾಕುಲಂ)ಗೆ ನಿರ್ದೇಶನ ನೀಡಿತ್ತು. ಈ ನಡುವೆ, ಸಂತ್ರಸ್ತೆ ನಟಿ ಪರ ವಕೀಲರು ತೀರ್ಪಿನ ಮೇಲೆ ಒಂದು ವಾರದ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಮೂರ್ತಿ ತಳ್ಳಿಹಾಕಿದ್ದರು. ಈ ನಡುವೆ, ಈ ಪ್ರಕರಣದ ವಿಚಾರಣೆಯನ್ನು 2021ರ ಫೆಬ್ರವರಿ 4ನೇ ತಾರೀಕಿನೊಳಗೇ ಮುಗಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. (ಏಜೆನ್ಸೀಸ್)