ಕರೋನಾ ವೈರಾಣು ಸೋಂಕಿನಿಂದ ಚೇತರಿಸಿಕೊಳ್ಳತ್ತಲೇ ವ್ಯಕ್ತಿ ಹೀಗಾ ಮಾಡೋದು...!?

covid
Published on

ನವದೆಹಲಿ: ಒಂದು ತಿಂಗಳ ಹಿಂದೆ ಕರೊನಾ ವೈರಾಣು ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ಸೇರಿದ್ದ ಖಾದರ್​ ಶೇಖ್​ (63) ಸಂಪೂರ್ಣ ಗುಣಮುಖರಾಗಿ ಬಂದಿದ್ದಾರೆ. ರಿಯಲ್​ ಎಸ್ಟೇಟ್​ ಉದ್ಯಮಿಯಾಗಿರುವ ಇವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ದುಬಾರಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇದಾದ ನಂತರದಲ್ಲಿ ಬಡವರಿಗಾಗಿ ಏನಾದರೂ ಮಾಡಬೇಕು ಎಂಬ ಕಾರಣಕ್ಕಾಗಿ ತಮ್ಮದೇ ಆದ ಕೋವಿಡ್-19​ ಆಸ್ಪತ್ರೆಯನ್ನು ಸೂರತ್​ನಲ್ಲಿ ಆರಂಭಿಸಿ ಮಾದರಿಯಾಗಿದ್ದಾರೆ.

ಸೂರತ್​ನ ಶ್ರೇಯಂ ಕಾಂಪ್ಲೆಕ್ಸ್​ನಲ್ಲಿ ಇವರು 30 ಸಾವಿರ ಚದರಡಿಯ ಕಚೇರಿ ಆವರಣವನ್ನು ಹೊಂದಿದ್ದಾರೆ. ಇದನ್ನೇ ಈಗ ಅವರು 85 ಹಾಸಿಗೆ ವ್ಯವಸ್ಥೆಯುಳ್ಳ ಕೋವಿಡ್​-19 ಆಸ್ಪತ್ರೆಯಾಗಿ ಪರಿವರ್ತಿಸಿದ್ದಾರೆ. ತಮ್ಮ ಮೊಮ್ಮಗಳು ಹಿಬಾ ಹೆಸರಿನಲ್ಲಿ ಆರಂಭಿಸಿರುವ ಈ ಆಸ್ಪತ್ರೆಯನ್ನು ಕೋವಿಡ್​-19ರಿಂದ ಬಳಲುತ್ತಿರುವ ಬಡರೋಗಿಗಳಿಗೆ ಚಿಕಿತ್ಸೆಗಾಗಿ ಬಳಸಿಕೊಳ್ಳಲು ಸೂರತ್​ ಮಹಾನಗರಪಾಲಿಕೆ (ಎಸ್​ಎಂಸಿ) ಜತೆ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ. ಈ ಒಪ್ಪಂದದ ಪ್ರಕಾರ ಎಸ್​ಎಂಸಿಯು ಈ ಆಸ್ಪತ್ರೆಗೆ ಅಗತ್ಯವಾದ ವೈದ್ಯರು, ಶುಶ್ರೂಷಕರು ಮತ್ತು ವೈದ್ಯಕೀಯ ಉಪಕರಣಗಳನ್ನು ಒದಗಿಸಲಿದೆ. ಜತೆಗೆ 15 ಐಸಿಯು ಹಾಸಿಎಗಳನ್ನೂ ಇಲ್ಲಿ ವ್ಯವಸ್ಥೆ ಮಾಡಲಿದೆ.

ಸಂಪೂರ್ಣ ಸಿದ್ಧವಾಗಿರುವ ಈ ಆಸ್ಪತ್ರೆಗೆ ಎಸ್​ಎಂಸಿಯ ಆಯುಕ್ತ ಬಿ.ಎನ್​. ಪಾಣಿ ಮತ್ತು ಉಪ ಆರೋಗ್ಯ ಆಯುಕ್ತ ಡಾ. ಆಶೀಶ್​ ನಾಯಕ್​ ಕೂಡ ಭೇಟಿ ನೀಡಿ ಅಲ್ಲಿನ ಸೌಲಭ್ಯವನ್ನು ಪರಿಶೀಲಿಸಿದ್ದಾರೆ.

ಹಿಬಾ ಆಸ್ಪತ್ರೆಗೆ ನಾವು ಭೇಟಿ ನೀಡಿ ಪರಿಶೀಲಿಸಿದೆವು. ಅಲ್ಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಆಸ್ಪತ್ರೆಯು ಕಾರ್ಯಾರಂಭಿಸಲಿದ್ದು, ನ್ಯೂ ಸಿವಿಲ್​ ಆಸ್ಪತ್ರೆ ಮತ್ತು ಎಂಎಂಐಎಂಇಆರ್​ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಡಾ. ಆಶೀಶ್​ ನಾಯಕ್​ ಹೇಳಿದ್ದಾರೆ.

ಯಾವುದೇ ಜಾತಿ, ಮತ, ಪಂಥದ ಬಡರೋಗಿಗಳು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. ನಾನು ಕೂಡ ಹುಟ್ಟುತ್ತಲೇ ಚಿನ್ನದ ಸ್ಪೂನ್​ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವನಲ್ಲ. ಸಾಕಷ್ಟು ಶ್ರಮಿಸಿದ ಬಳಿಕ ಈ ಎತ್ತರವನ್ನು ತಲುಪಿದ್ದೇನೆ. ಆರ್ಥಿಕವಾಗಿ ಸದೃಡನಾಗಿದ್ದೇನೆ. ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನಿಸಿತು. ಅದಕ್ಕಾಗಿ ಆಸ್ಪತ್ರೆಯನ್ನು ಆರಂಭಿಸಿದ್ದೇನೆ ಎಂದು ಖಾದರ್​ ಶೇಖ್​ ಹೇಳಿದ್ದಾರೆ.

ಊಟೋಪಚಾರಕ್ಕೂ ವ್ಯವಸ್ಥೆ: ಈ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು, ಶುಶ್ರೂಷಕರು ಮತ್ತು ಚಿಕಿತ್ಸೆ ಪಡೆಯುವ ಕರೊನಾ ವೈರಾಣು ಸೋಂಕಿತರಿಗೆ ಊಟ, ತಿಂಡಿ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಇದಕ್ಕಾಗಿ ಒಂದು ಅಡುಗೆಮನೆ, ಊಟದ ಆವರಣ ಎಲ್ಲವನ್ನೂ ಸಿದ್ಧಪಡಿಸಲಾಗಿದ್ದು, ಬಾಣಸಿಗರನ್ನೂ ನೇಮಿಸಿಕೊಳ್ಳಲಾಗುತ್ತಿದೆ ಎಂದು ಶೇಖ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net