ರಿಯಾಕ್ಟರ್ ಸ್ಫೋಟ: ಏಳು ಕಾರ್ಮಿಕರು ಮೃತ್ಯು

fire
Published on

ಅಮರಾವತಿ: ಆಂಧ್ರದ ಅನಕಾಪಲ್ಲಿ ಜಿಲ್ಲೆಯ ಅಚ್ಯುತಪುರಂ ಫಾರ್ಮಾಸ್ಯೂಟಿಕಲ್​ಕಂಪನಿಯಲ್ಲಿ ಬುಧವಾರ ಮಧ್ಯಾಹ್ನ ರಿಯಾಕ್ಟರ್ ಸ್ಫೋಟಗೊಂಡು ಏಳು ಕಾರ್ಮಿಕರು ಮೃತಪಟ್ಟಿದ್ದಾರೆ. 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಪಘಾತದ ತೀವ್ರತೆಗೆ ಅನುಗುಣವಾಗಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಎಸ್ಸೆಂಟಿಯಾ ಅಡ್ವಾನ್ಸ್‌ಡ್ ಸೈನ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ನೂರಾರು ಕಾರ್ಮಿಕರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಧ್ಯಾಹ್ನ 1:30ರ ಸುಮಾರಿಗೆ ಊಟದ ವಿರಾಮದ ವೇಳೆ ಭಾರಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ದಟ್ಟ ಹೊಗೆ ಆವರಿಸಿದ್ದು, ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿತ್ತು.

ಜೀವಭಯದಿಂದ ಕಾರ್ಮಿಕರು ಹೊರಗೆ ಓಡಿಬಂದಿದ್ದಾರೆ. ಶಬ್ದದಿಂದ ಅಕ್ಕಪಕ್ಕದ ಗ್ರಾಮಗಳ ಜನರು ಬೆಚ್ಚಿಬಿದ್ದರು. ಘಟನೆ ಸಂಭವಿಸಿದ ಕೂಡಲೇ ಅಗ್ನಿಶಾಮಕ ದಳ ಬಂದು ಬೆಂಕಿಯನ್ನು ಹತೋಟಿಗೆ ತಂದಿದೆ. ಗಾಯಾಳುಗಳನ್ನು ಅನಕಪಲ್ಲಿಯ ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಗಾಯಗೊಂಡವರ ಪೈಕಿ ಐವರಿಗೆ ಶೇ.60ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿವೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.

ಅಪಘಾತದ ಸಮಯದಲ್ಲಿ ಉದ್ಯಮದಲ್ಲಿ ಸುಮಾರು 300 ಕಾರ್ಮಿಕರು ಇದ್ದರು ಎಂದು ವರದಿಯಾಗಿದೆ. ರಿಯಾಕ್ಟರ್ ಸ್ಫೋಟದ ನಂತರ ಉದ್ಯಮದ ಮೊದಲ ಮಹಡಿಯ ಪಿಲ್ಲರ್ ಕುಸಿದುಬಿದ್ದಿದೆ ಮತ್ತು ಅನೇಕ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕಾರ್ಮಿಕರು ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net