

ಬೆಂಗಳೂರು: ಮುಂದಿನ ವರ್ಷದ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡ ಹೊಸ ತರಬೇತಿ ಬಳಗದೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಹರಡಿದೆ. ತಂಡದ ಹಾಲಿ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ಮತ್ತು ಮುಖ್ಯ ಕೋಚ್ ಸಂಜಯ್ ಬಂಗಾರ್ ಜತೆಗಿನ ಒಪ್ಪಂದವನ್ನು ಆರ್ಸಿಬಿ ಕೊನೆಗೊಳಿಸಲಿದೆ ಎಂದು ವರದಿಯಾಗಿದೆ.
ಆರ್ಸಿಬಿ ತಂಡದ ತರಬೇತಿ ಬಳಗದ ಹಾಲಿ ಒಪ್ಪಂದ ಮುಂದಿನ ಸೆಪ್ಟೆಂಬರ್ಗೆ ಕೊನೆಯಾಗಲಿದೆ. ಅದಕ್ಕೆ ಮುನ್ನ ಅವರ ನಿರ್ವಹಣೆಯ ಬಗ್ಗೆ ಆರ್ಸಿಬಿ ತಂಡದ ಮ್ಯಾನೇಜ್ಮೆಂಟ್ ಪರಾಮರ್ಶೆ ನಡೆಸಲಿದ್ದು, ಶೀಘ್ರವೇ ಅಂತಿಮ ನಿರ್ಧಾರಕ್ಕೆ ಬರಲಿದೆ ಎನ್ನಲಾಗಿದೆ.
ಆರ್ಸಿಬಿ ತಂಡ ಐಪಿಎಲ್ನಲ್ಲಿ ಕಳೆದ 16 ಆವೃತ್ತಿಗಳಿಂದಲೂ ಪ್ರಶಸ್ತಿ ಗೆದ್ದಿಲ್ಲ. ಹೆಸ್ಸನ್ ಮತ್ತು ಬಂಗಾರ್ ಕಳೆದ 5 ವರ್ಷಗಳಿಂದ ತಂಡದ ತರಬೇತಿ ಬಳಗದಲ್ಲಿದ್ದರೂ, ಪ್ರಶಸ್ತಿ ಗೆಲುವಿನ ಬರ ನೀಗಿಲ್ಲ. ಇವರಿಬ್ಬರು ಮಾಜಿ ನಾಯಕ ವಿರಾಟ್ ಕೊಹ್ಲಿ ಜತೆಗೆ ಉತ್ತಮ ಸಂಬಂಧ ಹೊಂದಿದ್ದರೂ, ಪ್ರಶಸ್ತಿ ಗೆಲ್ಲಿಸಿಕೊಡದಿರುವ ಕಾರಣ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ನ್ಯೂಜಿಲೆಂಡ್ನ ಮೈಕ್ ಹೆಸ್ಸನ್ 2019ರಿಂದ ತಂಡದ ತರಬೇತಿ ಬಳಗದಲ್ಲಿದ್ದರೆ, ಬಂಗಾರ್ ಕಳೆದ ವರ್ಷ ತಂಡದ ಮುಖ್ಯ ಕೋಚ್ ಆಗಿ ಬಡ್ತಿ ಪಡೆದಿದ್ದರು. ಆರ್ಸಿಬಿ ತಂಡ 2020ರಿಂದ 2022ರವರೆಗೆ ಸತತ 3 ವರ್ಷ ಪ್ಲೇಆಫ್ಗೇರಿದ್ದರೂ, ಫೈನಲ್ಗೇರಲು ವಿಫಲವಾಗಿತ್ತು. ಕಳೆದ ಆವೃತ್ತಿಯಲ್ಲಿ ಆರ್ಸಿಬಿ ಪ್ಲೇಆಫ್ಗೂ ಪ್ರವೇಶಿಸಿರಲಿಲ್ಲ. ಮೈಕ್ ಹೆಸ್ಸನ್ ಮಹಿಳೆಯರ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲೂ ಆರ್ಸಿಬಿ ಮಹಿಳಾ ತಂಡಕ್ಕೆ ಕೋಚ್ ಆಗಿದ್ದರು. ಆದರೆ ಸ್ಮೃತಿ ಮಂದನಾ ನೇತೃತ್ವದ ತಂಡ 5 ತಂಡಗಳ ಪೈಕಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.