2008ರಿಂದ ಇಲ್ಲಿಯವರೆಗೆ ಒಂದೇ ಒಂದು ಕಪ್​ ಗೆದ್ದಿಲ್ಲ; RCB ಟ್ರೋಫಿ ಗೆಲ್ಲದಿರಲು ಇದೇ ಕಾರಣ: ಮಾಜಿ ಕ್ರಿಕೆಟಿಗ ಮುಕ್ತ ಮಾತು

ವಿಜಯವಾಣಿ (91)
Published on

RCB: ನಾಳೆ (ಮಾ.28) ಐಪಿಎಲ್​ 18ನೇ ಆವೃತ್ತಿಯ ಅತ್ಯಂತ ಕುತೂಹಲಕಾರಿ, ರೋಚಕತೆಗೆ ಸಾಕ್ಷಿಯಾಗುವಂತ ಪಂದ್ಯ ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ನಡೆಯಲಿದೆ. ಐಪಿಎಲ್​ ಇತಿಹಾಸದಲ್ಲಿ ಬದ್ಧ ವೈರಿ ತಂಡಗಳು ಎಂದೇ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಐದು ಬಾರಿ ಚಾಂಪಿಯನ್ಸ್ ಆಗಿ ಮಿಂಚಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿ ಸೆಣಸಲಿದೆ. ಇದು ಕ್ರಿಕೆಟ್ ಅಭಿಮಾನಿಗಳ ಕಾತರವನ್ನು ಮತ್ತಷ್ಟು ದುಪ್ಪಟ್ಟಾಗಿಸಿದೆ.

ಬದ್ಧ ವೈರಿಗಳ ಕದನ

ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಒಟ್ಟು 32 ಪಂದ್ಯಗಳ ಪೈಕಿ ಆರ್​ಸಿಬಿ 11 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಅದರಲ್ಲೂ ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ಪಡೆ ಎದುರು ಆರ್​ಸಿಬಿ ಗೆದ್ದಿರುವುದು ಕೇವಲ ಒಂದೇ ಒಂದು ಪಂದ್ಯ. ಅದು 2008ರಲ್ಲಿ ನಡೆದ ಲೀಗ್​ನಲ್ಲಿ ಎಂಬುದು ಇಲ್ಲಿ ಗಮನಾರ್ಹ. ಹೀಗಿರುವಾಗ ನಾಳಿನ ಪಂದ್ಯದಲ್ಲಿ ಎರಡನೇ ಬಾರಿ ಚೆನ್ನೈನಲ್ಲೇ ಸಿಎಸ್​ಕೆಯನ್ನು ಆರ್​ಸಿಬಿ ಸೋಲಿಸಲಿದೆಯಾ? ಅಂಥಾ ಪೈಪೋಟಿ ಕೊಡಲಿದೆಯಾ ಎಂಬ ಪ್ರಶ್ನೆಗಳು ಮೂಡಿವೆ.

ಕಪ್​ ಗೆಲ್ಲದಿರಲು ಇದೇ ಕಾರಣ!

2008ರಿಂದ ಇಲ್ಲಿಯವರೆಗೆ ಐಪಿಎಲ್​ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಟ್ರೋಫಿ ಎತ್ತಿಹಿಡಿದಿಲ್ಲ ಎಂಬುದು ಅತ್ಯಂತ ಬೇಸರದ ಸಂಗತಿ. ಇದಕ್ಕೆ ಕಾರಣವೇನು ಎನ್ನುವುದನ್ನು ಯಾರೂ ಅಷ್ಟಾಗಿ ಚರ್ಚಿಸಿಲ್ಲ. ಪ್ರತಿವರ್ಷ ಫ್ರಾಂಚೈಸಿಯಲ್ಲಿ ಹೊಸಬರು ಸೇರಿದಂತೆ ಆಲ್​ರೌಂಡ್​ ಆಟಗಾರರ ಬದಲಾವಣೆಗಳು ಆಗಿದ್ದೇ ಆದರೂ ಗೆಲುವು ಮಾತ್ರ ಆರ್​ಸಿಬಿಯಿಂದ ಬಹಳ ದೂರ ಸರಿದಿದೆ. ಈ ಕುರಿತಂತೆ ಟೀಮ್ ಇಂಡಿಯಾ ಮಾಜಿ ಹಿರಿಯ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಮಾತನಾಡಿ, ಏಕೆ ಟ್ರೋಫಿ ಗೆದ್ದಿಲ್ಲ ಎಂಬುದನ್ನು ಕಾರಣ ಸಹಿತ ವಿವರಿಸಿದ್ದಾರೆ.

ವಿರಾಟ್​ ಕೊಹ್ಲಿ ಅವರ ರನ್​ವೊಂದೇ ತಂಡವನ್ನು ಗೆಲ್ಲಿಸಲು ಸಾಧ್ಯವಿಲ್ಲ. ರನ್​ಗಳ ಹೊಳೆಯನ್ನೇ ಹರಿಸುವ ಕೊಹ್ಲಿಗೆ ತಂಡ ಕೂಡ ಸಾಥ್​ ನೀಡಬೇಕು. ಅತ್ಯಧಿಕ ರನ್​ ಐಪಿಎಲ್​ ಟ್ರೋಫಿ ಗೆದ್ದುಕೊಡುವುದಿಲ್ಲ. ಪ್ರತಿ ವರ್ಷದ ಆವೃತ್ತಿಯಲ್ಲಿಯೂ ಕೊಹ್ಲಿ ಹೆಚ್ಚುವರಿ ರನ್​ಗಳನ್ನು ದಾಖಲಿಸುತ್ತಾರೆ. ದುರಾದೃಷ್ಟ ಒಂದೇ ಒಂದು ಕಪ್ ಕೂಡ​ ಅವರ ಫ್ರಾಂಚೈಸಿಯದ್ದಾಗಿಲ್ಲ. ಒಬ್ಬರ ಕೈಯಲ್ಲಿ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ. ಇಲ್ಲಿ ತಂಡದ ಕಾಂಬಿನೇಷನ್​ ಬಹಳ ಮುಖ್ಯ. ಪ್ರತಿಯೊಬ್ಬರು ಕೈಜೋಡಿಸಿದರೆ ಮಾತ್ರ ಕಪ್ ಗೆಲ್ಲಲು ಸಾಧ್ಯ ಎಂದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net