ಸಾಲಗಾರರಿಗೆ ಮತ್ತೆ ನಿರಾಶೆ! ಎರಡನೇ ಬಾರಿಯೂ ಬದಲಾಗಲಿಲ್ಲ ರೆಪೋ ದರ; ಶೇ.5.5ರಲ್ಲೇ ಉಳಿಸಿದ ಆರ್​ಬಿಐ | RBI Repo Rate

ವಿಜಯವಾಣಿ (7)
Published on

RBI Repo Rate: ನೀವು ಬ್ಯಾಂಕಿನಿಂದ ಸಾಲ ಪಡೆದಿದ್ದೀರಾ? ಹಾಗಿದ್ರೆ, ಆರ್​ಬಿಐನ ಈ ನಿರ್ಧಾರ ನಿಮಗೆ ಬೇಸರ ಮೂಡಿಸಲಿದೆ. ಎರಡನೇ ಬಾರಿಯೂ ಆರ್‌ಬಿಐ ತನ್ನ ರೆಪೊ ದರವನ್ನು ಬದಲಾಯಿಸಿಲ್ಲ. ಎಂದಿನಂತೆ ಶೇ.5.5ರಲ್ಲೇ ಮುಂದುವರಿಸಿದೆ. ದೀಪಾವಳಿ ಹಬ್ಬಕ್ಕೂ ಮುನ್ನ ಸಾಲದ ಕಂತುಗಳಲ್ಲಿ ಕೊಂಚ ರಿಲೀಫ್ ಸಿಗಲಿದೆ ಎಂದೇ ಆಶಿಸಿದ್ದ ಸಾಲಗಾರರ ಭರವಸೆ ಇದೀಗ ಮತ್ತೆ ಹುಸಿಯಾಗಿದೆ.

ಇಂದು (ಅ.01) ನಡೆದ ಆರ್‌ಬಿಐ ಹಣದುಬ್ಬರ ಸಭೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಪ್ರಮುಖ ನೀತಿ ದರ ರೆಪೊ ದರವನ್ನು ಶೇ.5.5ರಲ್ಲಿ ಇರಿಸಿದೆ. ಪ್ರಸ್ತುತ ದೇಶೀಯ ಮತ್ತು ಜಾಗತಿಕ ಪರಿಸ್ಥಿತಿಗಳನ್ನು ಪರಿಗಣಿಸಿ, ಆರ್‌ಬಿಐ ಹಣಕಾಸು ನೀತಿ ಸಮಿತಿ (ಎಂಪಿಸಿ) ನೀತಿ ದರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, "ಸಮಿತಿಯು ರೆಪೊ ದರವನ್ನು ಶೇ.5.5ರಲ್ಲಿಯೇ ಇರಿಸಲು ಸರ್ವಾನುಮತದಿಂದ ನಿರ್ಧರಿಸಿದೆ" ಎಂದು ಹೇಳಿದರು.

ದೇಶದ ಸ್ಥೂಲ ಆರ್ಥಿಕ ಪರಿಸ್ಥಿತಿ ಮತ್ತು ನಿರೀಕ್ಷೆಗಳನ್ನು ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು. ಎಂಎಸ್‌ಎಫ್ ದರ ಮತ್ತು ಬ್ಯಾಂಕ್ ದರವು ಶೇ.5ರ ಸಮೀಪದಲ್ಲಿ ಉಳಿಯುತ್ತದೆ. ಬಡ್ಡಿದರಗಳು ಕಡಿಮೆಯಾಗುತ್ತವೆ ಎಂದು ನಿರೀಕ್ಷಿಸಿದ್ದ ಕೈಗಾರಿಕಾ ಸಮೂಹಗಳಿಗೆ ಈ ನಿರ್ಧಾರ ನಿರಾಶೆಗೊಳಿಸಿದೆ. ಬಡ್ಡಿದರಗಳು ಇಳಿಕೆಯಾಗಲಿದೆ ಎಂದು ತಜ್ಞರು ಊಹೆಗಳು ಸಹ ಉಲ್ಟಾ ಹೊಡೆದಿವೆ.

ರೆಪೊ ದರ ಕಡಿಮೆಯಾಗದಿದ್ದರೆ, ಗ್ರಾಹಕರು ತಮ್ಮ ಸಾಲದ ಇಎಂಐಗಳಲ್ಲಿ ಯಾವುದೇ ರಿಲೀಫ್​ ಅನ್ನು ಪಡೆಯುವುದಿಲ್ಲ. ರೆಪೊ ದರವು ವಾಣಿಜ್ಯ ಬ್ಯಾಂಕುಗಳು ತಮ್ಮ ತಕ್ಷಣದ ಅಗತ್ಯಗಳನ್ನು ಪೂರೈಸಲು ಆರ್‌ಬಿಐನಿಂದ ಸಾಲ ಪಡೆಯುವ ದರವಾಗಿದೆ. ಈ ದರ ಬದಲಾಗದಿದ್ದರೆ, ಗೃಹ ಸಾಲ, ವಾಹನ ಸಾಲ ಮತ್ತು ಇತರ ಚಿಲ್ಲರೆ ಸಾಲಗಳ ಮೇಲಿನ ಬಡ್ಡಿದರಗಳನ್ನು ಬದಲಾಯಿಸುವ ಸಾಧ್ಯತೆ ಇರುವುದಿಲ್ಲ ಎಂಬುದು ಇಲ್ಲಿ ಗಮನಾರ್ಹ.

ರೆಪೊ, ಸಾಲ ಮತ್ತು ಎಫ್‌ಡಿ ದರದ ನಡುವೆ ಏನು ವ್ಯತ್ಯಾಸ?

ರೆಪೊ ದರ ಕಡಿಮೆಯಾದಾಗ, ಬ್ಯಾಂಕುಗಳು ಆರ್‌ಬಿಐನಿಂದ ಅಗ್ಗದ ಸಾಲಗಳನ್ನು ಪಡೆಯುತ್ತವೆ. ಈ ಪ್ರಯೋಜನವನ್ನು ಗ್ರಾಹಕರಿಗೆ ರವಾನಿಸಲು, ಸಾಲದ ಬಡ್ಡಿದರಗಳನ್ನು ಕಡಿತಗೊಳಿಸುತ್ತದೆ. ರೆಪೊ-ಸಂಬಂಧಿತ ಸಾಲ ದರಗಳು ಕಡಿಮೆಯಾಗುವುದಲ್ಲದೆ, ಅನೇಕ ಬ್ಯಾಂಕುಗಳು ತಮ್ಮ ಎಂಸಿಎಲ್‌ಆರ್ (ನಿಧಿ ಆಧಾರಿತ ಸಾಲ ದರಗಳ ಮಾರ್ಜಿನಲ್ ವೆಚ್ಚ) ಅನ್ನು ಸಹ ಕಡಿಮೆ ಮಾಡುತ್ತಾರೆ. ಆರ್‌ಬಿಐ ರೆಪೊ ದರವನ್ನು ಏರಿಸಿದಾಗ, ಸಾಲಗಳು ಆಯಾ ಬ್ಯಾಂಕ್​ಗಳಿಗೆ ಹೆಚ್ಚು ದುಬಾರಿಯಾಗುತ್ತವೆ. ಈ ಕಾರಣದಿಂದ, ಬ್ಯಾಂಕ್​ಗಳು ಗ್ರಾಹಕರಿಗೆ ಸಾಲದ ದರಗಳನ್ನು ತೀವ್ರವಾಗಿ ಹೆಚ್ಚಿಸುತ್ತವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net