

Repo Rates: ಮೂರನೇ ಬಾರಿಗೆ ರೆಪೊ ದರ ಕಡಿತಗೊಳಿಸಲು ಮಾತುಕತೆ ನಡೆಸಿದ್ದ ಆರ್‌ಬಿಐ ಕಡೆಗೂ ಬ್ಯಾಂಕ್ ಸಾಲಗಾರರಿಗೆ ಶುಭ ಸುದ್ದಿಯನ್ನೇ ನೀಡಿದೆ. ಹ್ಯಾಟ್ರಿಕ್ ರೆಪೊ ದರ ಕಡಿತಗೊಳಿಸುವ ಮೂಲಕ ಕಾರು ಮತ್ತು ಗೃಹ ಸಾಲ ಪಡೆಯುವ ಗ್ರಾಹಕರಲ್ಲಿ ಇದೀಗ ಮಂದಹಾಸ ಮೂಡಿಸಿದೆ.
ಆರ್‌ಬಿಐ 5.50 ಪ್ರತಿಶತದಷ್ಟು ರೆಪೊ ದರ ಕಡಿತಗೊಳಿಸಿದೆ. ಈ ಬೆಳವಣಿಗೆಯಿಂದ ಗೃಹ ಸಾಲಗಳು ಮತ್ತು ಕಾರು ಸಾಲಗಳ ಬಡ್ಡಿ ದರಗಳು ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ. ಆರ್‌ಬಿಐ ಹಣಕಾಸು ನೀತಿ ಸಮಿತಿಯಲ್ಲಿ (ಎಂಪಿಸಿ ಸಭೆ) ಆರ್‌ಬಿಐ ಯಾವ ನಿರ್ಧಾರವನ್ನು ಪ್ರಕಟಿಸುತ್ತದೆ ಎಂಬುದರ ಕುರಿತು ಸಾಕಷ್ಟು ಆಸಕ್ತಿಕರ ಚರ್ಚೆಗಳು ನಡೆದಿತ್ತು. ಇದೀಗ ಆ ಕುತೂಹಲಗಳಿಗೆ 50 ಪಾಯಿಂಟ್ ಇಳಿಕೆ ಮೂಲಕ ತೆರೆ ಬಿದ್ದಿವೆ.
ಈ ಪರಿಶೀಲನಾ ಸಭೆಯಲ್ಲಿ ಕೇಂದ್ರ ಬ್ಯಾಂಕ್ ಮೂರನೇ ಬಾರಿಗೆ ಪ್ರಮುಖ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಹಣದುಬ್ಬರವು ಶೇ.4ಕ್ಕಿಂತ ಕಡಿಮೆ ಮತ್ತು ಅಮೆರಿಕದ ಸುಂಕಗಳಿಂದಾಗಿ ವ್ಯಾಪಾರ ಅನಿಶ್ಚಿತತೆ ಇರುವುದರಿಂದ, ಬೆಳವಣಿಗೆಯನ್ನು ಹೆಚ್ಚಿಸಲು ಆರ್‌ಬಿಐ ಬಡ್ಡಿದರಗಳನ್ನು ತೀವ್ರವಾಗಿ ಕಡಿತಗೊಳಿಸಿದೆ. ಹಿಂದೆ ಎರಡು ಬಾರಿ ಬಡ್ಡಿದರಗಳನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದ್ದ ಆರ್‌ಬಿಐ, ಇದೀಗ ಮೂರನೇ ಬಾರಿಗೆ ಬಡ್ಡಿದರಗಳನ್ನು ಕಡಿತಗೊಳಿಸಿರುವುದು ಉತ್ತಮ ಬೆಳವಣಿಗೆ.
ರೆಪೊ ದರವನ್ನು ಶೇ.5.50ರಷ್ಟು ಅಥವಾ 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿರುವುದಾಗಿ ಆರ್‌ಬಿಐ ಹೇಳಿದೆ. ಆರ್‌ಬಿಐ ಘೋಷಣೆಗೆ ಅನುಗುಣವಾಗಿ, ಅನೇಕ ಬ್ಯಾಂಕುಗಳು ರೆಪೊ ಸಾಲ ದರಗಳು ಮತ್ತು ಎಂಸಿಎಲ್‌ಆರ್ ಅನ್ನು ತೀವ್ರವಾಗಿ ಕಡಿಮೆ ಮಾಡಿವೆ. ಮೂರನೇ ಬಾರಿಗೆ ರೆಪೊ ದರ ಕಡಿಮೆಯಾದ ಹಿನ್ನೆಲೆ ಇದೀಗ ಸಾಲಗಾರರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ರೆಪೊ ದರ ಕುಸಿತಗೊಂಡ ಬೆನ್ನಲ್ಲೇ ಗೃಹ ಸಾಲ (ಹೋಮ್ ಲೋನ್) ಮತ್ತು ಕಾರು ಸಾಲದ ಮೇಲೆ ವಿಧಿಸಲಾದ ಇಎಂಐ ಕೂಡ ಕಡಿಮೆಯಾಗಲಿದೆ. ಪರಿಣಾಮವಾಗಿ, ಗೃಹ ಸಾಲ ಮತ್ತು ಕಾರು ಸಾಲಗಳು ಅಗ್ಗವಾಗುತ್ತವೆ ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).