

ಚಿಕ್ಕಬಳ್ಳಾಪುರ:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ನೋಡಲು ತೆರಳಿದ್ದಾಗ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಲ್ಲಿ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗ್ರಾಮದ ಪ್ರಜ್ವಲ್ (22) ಮೃತಪಟ್ಟಿದ್ದಾರೆ. ಈತ ಟೊಯೋಟಾ
ಕಿಲೋರ್ಸ್ಕರ್ ಕಂಪನಿ ಉದ್ಯೋಗಿ.
ಕಳೆದ ಏಳೆಂಟು ವರ್ಷಗಳಿಂದ ಯಲಹಂಕ ನ್ಯೂಟೌನ್, ಚೊಕ್ಕಬೊಮ್ಮಸಂದ್ರ ಕ್ರಾಸ್ ಬಳಿ ಡೇರಿ ಸರ್ಕಲ್ ಸಮೀಪ ವಾಸವಿರುವ ಗಣೇಶ್ ಅವರ ಪುತ್ರ ಪ್ರಜ್ವಲ್, ಸ್ನೇಹಿತರ ಜತೆ ವಿಜಯೋತ್ಸವ ವೀಕ್ಷಿಸಲು ಹೋಗಿದ್ದರು. ಕಾಲ್ತುಳಿತದಲ್ಲಿ ಗಾಯಗೊಂಡಿದ್ದ ಪ್ರಜ್ವಲ್ ಅವರನ್ನು ವೈದೇಹಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮರಣೋತ್ತರ ಪರೀಕ್ಷೆ ನಂತರ ಪ್ರಜ್ವಲ್ ಮೃತದೇಹವನ್ನು ಗುರುವಾರ ಬೆಳಗ್ಗೆ ಸ್ವಂತ ಊರು ಗೋಪಲ್ಲಿ ಗ್ರಾಮಕ್ಕೆ ತರಲಾಯಿತು. ಮೃತನ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಮಧ್ಯಾಹ್ನ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಗಣೇಶ್ ದಂಪತಿಗೆ ಪ್ರಜ್ವಲ್ ಒಬ್ಬನೇ ಪುತ್ರ. ಬುಧವಾರ ಕೆಲಸ ಮುಗಿಸಿ ಹೊರಟಿದ್ದ ಪ್ರಜ್ವಲ್, ಆರ್ಸಿಬಿ ವಿಜಯೋತ್ಸವ ನೋಡಿಕೊಂಡು ಬರುವುದಾಗಿ ಪಾಲಕರಿಗೆ ಕರೆ ಮಾಡಿ ತಿಳಿಸಿದ್ದ. ಎಷ್ಟು ಹೊತ್ತಾದರೂ ಮಗ ಬಾರದಿದ್ದಾಗ ಕರೆ ಮಾಡಿದರೆ ಸ್ವೀಕರಿಸದಿದ್ದಾಗ ಗಾಬರಿಗೊಂಡ ಪಾಲಕರಿಗೆ ಮಗ ಮೃತಪಟ್ಟಿರುವ ವಿಷಯ ಗೊತ್ತಾಗಿದೆ.