

RBI: ಇತ್ತೀಚೆಗಷ್ಟೇ ಭಾರತದ ಎರಡನೇ ಅತಿದೊಡ್ಡ ಸಾಲದಾತ ಬ್ಯಾಂಕ್ ಎನಿಸಿಕೊಂಡಿರುವ ಐಸಿಐಸಿಐ, ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಗ್ರಾಹಕರಿಗೆ ಮಾಸಿಕ ಮಿನಿಮಮ್ ಬ್ಯಾಲೆನ್ಸ್ ಅನ್ನು ಹೆಚ್ಚಿಸಿದೆ. ಬ್ಯಾಂಕಿನ ವೆಬ್ಸೈಟ್ ಹಂಚಿಕೊಂಡ ಮಾಹಿತಿ ಪ್ರಕಾರ, ಆಗಸ್ಟ್ 1ರಂದು ಅಥವಾ ನಂತರ ತಮ್ಮ ಉಳಿತಾಯ ಖಾತೆಗಳನ್ನು ತೆರೆದಿರುವ ಮೆಟ್ರೋ ನಗರ ಮತ್ತು ನಗರ ಪ್ರದೇಶಗಳಲ್ಲಿನ ಗ್ರಾಹಕರು ದಂಡವನ್ನು ತಪ್ಪಿಸಲು ಮಾಸಿಕ 50,000 ರೂ. ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಿದೆ. ಅಷ್ಟಕ್ಕೂ ಈ ಬಗ್ಗೆ ಆರ್ಬಿಐ ನಿಯಮಾವಳಿಗಳು ಏನಿದೆ? ಹೆಚ್ಚಿಸುವ ನಿರ್ಧಾರ ಕೈಗೊಳ್ಳುವವರು ಯಾರು? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಗ್ರಾಹಕರು ಯಾವುದೇ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಈಗ ಕಡ್ಡಾಯ ನಿಯಮವಾಗಿದೆ. ಆದರೆ, ಕನಿಷ್ಠ ಬ್ಯಾಲೆನ್ಸ್ ಎಷ್ಟಿರಬೇಕು ಎಂಬುದನ್ನು ನಿರ್ಧರಿಸುವವರು ಯಾರು? ಈ ಸೂಚನೆ ಆರ್ಬಿಐ ಕೊಡುತ್ತದೆಯೇ? ಎಂಬುದು ಸದ್ಯ ಹಲವರಲ್ಲಿ ಕಾಡುತ್ತಿದೆ. ಐಸಿಐಸಿಐ ಬ್ಯಾಂಕ್ ತೆಗೆದುಕೊಂಡ ನಿರ್ಧಾರವೇ ಈ ಚರ್ಚೆಗೆ ದೊಡ್ಡ ಕಾರಣವಾಗಿದೆ. ಕನಿಷ್ಠ ಬ್ಯಾಲೆನ್ಸ್ ವಿಷಯವು ಸದ್ಯ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿದೆ. ಇದರ ಬಗ್ಗೆ ಗ್ರಾಹಕರಿಂದ ಟೀಕೆಗಳು ಸಹ ವ್ಯಕ್ತವಾಗಿವೆ.
ಈ ವಿಷಯದಲ್ಲಿ ಆರ್ಬಿಐ ಮತ್ತು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಮಿನಿಮಮ್ ಬ್ಯಾಲೆನ್ಸ್ ಕುರಿತು ಉಂಟಾದ ಗೊಂದಲ, ಟೀಕೆಗಳ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಅಷ್ಟಕ್ಕೂ ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ವಿವರಿಸಿದ್ದಾರೆ.
ಉಳಿತಾಯ ಖಾತೆಗಳಿಗೆ ಕನಿಷ್ಠ ಸರಾಸರಿ ಬ್ಯಾಲೆನ್ಸ್ (MAB) ನಿರ್ಧರಿಸುವಲ್ಲಿ ಬ್ಯಾಂಕುಗಳು ಸಂಪೂರ್ಣ ಸ್ವಾಯತ್ತತೆಯನ್ನು ಹೊಂದಿವೆ. ಈ ವಿಷಯವು ಕೇಂದ್ರ ಬ್ಯಾಂಕಿನ ವ್ಯಾಪ್ತಿಗೆ ಬರುವುದಿಲ್ಲ. ವೈಯಕ್ತಿಕ ಬ್ಯಾಂಕ್ಗಳ ಉಳಿತಾಯ ಖಾತೆಗಳಿಗೆ ಕನಿಷ್ಠ ಸರಾಸರಿ ಬ್ಯಾಲೆನ್ಸ್ (MAB) ಅವಶ್ಯಕತೆಗಳನ್ನು ಸ್ವತಂತ್ರವಾಗಿ ನಿರ್ಧರಿಸಬಹುದು" ಎಂದು RBI ಗವರ್ನರ್ ತಿಳಿಸಿದ್ದಾರೆ.
"ಕನಿಷ್ಠ ಸರಾಸರಿ ಬ್ಯಾಲೆನ್ಸ್ ಅನ್ನು ನಿರ್ಧರಿಸುವ ಜವಾಬ್ದಾರಿಯನ್ನು ಆರ್ಬಿಐ ಆಯಾ ಬ್ಯಾಂಕುಗಳಿಗೆಯೇ ಬಿಟ್ಟಿದೆ. ಹಲವು ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ ಮಿತಿಯನ್ನು 10,000 ರೂ.ಗೆ ಮಾಡಿದರೆ, ಕೆಲವು 2,000 ರೂ.ಗೆ ಮಾತ್ರ ಸೀಮಿತಗೊಳಿಸಿವೆ. ಇನ್ನೂ ಒಂದಷ್ಟು ಬ್ಯಾಂಕ್ಗಳು ಅದನ್ನು ತೆಗೆದುಹಾಕಿ, ಜೀರೋ ಬ್ಯಾಲೆನ್ಸ್ಗೆ ಅನುಮತಿ ನೀಡಿವೆ" ಎಂದು ಹೇಳಿದರು.
ಬಾಂಕಿನ ಹಳೆಯ ಗ್ರಾಹಕರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಅವರು ಮಿನಿಮಮ್ ಬ್ಯಾಲೆನ್ಸ್ 10,000 ರೂ.ನೊಂದಿಗೆ ಮುಂದುವರಿಯಲಿದ್ದಾರೆ. ಈ ನಿಯಮ ಹೊಸದಾಗಿ ಬ್ಯಾಂಕ್ ಖಾತೆ ತರೆಯುವ ಗ್ರಾಹಕರಿಗೆ ಮಾತ್ರ ಅನ್ವಯ ಎಂದು ಸ್ಪಷ್ಟಪಡಿಸಿದೆ. ಮೆಟ್ರೋ ನಗರ ಮತ್ತು ನಗರ ಪ್ರದೇಶಗಳನ್ನು ಹೊರತುಪಡಿಸಿ, ಅರೆ ನಗರ ಪ್ರದೇಶಗಳಲ್ಲಿ ಹೊಸ ಗ್ರಾಹಕರು 25,000 ರೂ. ಮಿನಿಮಮ್ ಬ್ಯಾಲೆನ್ಸ್ ಅನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಉಳಿದಂತೆ ಗ್ರಾಮೀಣ ಪ್ರದೇಶದ ಗ್ರಾಹಕರು 10,000 ರೂ. ಬ್ಯಾಲೆನ್ಸ್ ಇಟ್ಟುಕೊಳ್ಳಬೇಕು ಎಂದು ತಿಳಿಸಿದೆ,(ಏಜೆನ್ಸೀಸ್).