ವಿಶ್ವಾಸಾರ್ಹತೆಯನ್ನು ಮರಳಿ ಪಡೆಯಲು ಚುನಾವಣಾ ಆಯೋಗ ಉತ್ತರಿಸಬೇಕು: ಶಶಿ ತರೂರ್| Election Commission

Shashi Tharoor
Published on: 

Election Commission: ಚುನಾವಣಾ ಆಯೋಗವು ತನ್ನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ವಿಪಕ್ಷ ನಾಯಕ ರಾಹುಲ್ ಗಾಂಧಿ ಎತ್ತಿರುವ ವಿಷಯವನ್ನು ಪರಿಹರಿಸಬೇಕೆಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಸೋಮವಾರ (ಆಗಸ್ಟ್,​11) ಹೇಳಿದ್ದಾರೆ.

ಚುನಾವಣಾ ಆಯೋಗದ ವಿರುದ್ಧದ ಇಂಡಿಯಾ ಬ್ಲಾಕ್ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾತನಾಡಿದ ತರೂರ್, ಚುನಾವಣೆಗಳ ನ್ಯಾಯದ ಬಗ್ಗೆ ಜನರ ಮನಸ್ಸಿನಲ್ಲಿ ಸಂದೇಹಗಳು ಬಂದಿವೆ.ಆದರಿಂದ ಚುನಾವಣಾ ಆಯೋಗದ ವಿಶ್ವಾಸಾರ್ಹತೆಗೆ ಹಾನಿಯಾಗುತ್ತದೆ. ಈ ಸಂದೇಹಗಳನ್ನು ಪರಿಹರಿಸಿದರೆ, ಚುನಾವಣಾ ಆಯೋಗವು ತನ್ನ ವಿಶ್ವಾಸಾರ್ಹತೆಯನ್ನು ಮರಳಿ ಪಡೆಯಬಹುದು. ಅಲ್ಲದೆ, ಚುನಾವಣಾ ಆಯೋಗದ ಸ್ವಂತ ಆಸಕ್ತಿಯು ಈ ಪ್ರಶ್ನೆಗಳನ್ನು ಪರಿಹರಿಸುವಲ್ಲಿ ಅಡಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಮತ ಕಳ್ಳತನ ಆರೋಪ ಮತ್ತು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ, ಇಂಡಿಯಾ ಬ್ಲಾಕ್‌ನ ನೂರಾರು ಸಂಸದರು ಸೋಮವಾರ ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿಗೆ ಮೆರವಣಿಗೆ ನಡೆಸಿದರು.

ಚುನಾವಣಾ ಆಯೋಗದ ಕಚೇರಿಯ ಕಡೆಗೆ ಮೆರವಣಿಗೆ ನಡೆಸುತ್ತಿದ್ದ ಸಂಸದರನ್ನು ದೆಹಲಿ ಪೊಲೀಸರು ತಡೆದರು. ಮೆರವಣಿಗೆಯ ಸಮಯದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಸಂಜಯ್ ರಾವತ್ ಸೇರಿದಂತೆ ಹಲವಾರು ನಾಯಕರನ್ನು ಸಹ ಬಂಧಿಸಲಾಯಿತು.(ಏಜೆನ್ಸೀಸ್​)