5 ಗೆಲುವು, ತವರಿನಲ್ಲಿ 3 ಸೋಲು; ವಿರಾಟ್​ ಕೊಹ್ಲಿ ಕೊನೆಯವರೆಗೂ... ಆರ್​ಸಿಬಿಗೆ ಅಂಬಟಿ ರಾಯುಡು ಕಿವಿಮಾತು | RCB

ವಿಜಯವಾಣಿ (54)
Published on

RCB: ಐಪಿಎಲ್​ 18ನೇ ಆವೃತ್ತಿಯಲ್ಲಿ ಮೊದಲನೇ ಪಂದ್ಯದಿಂದಲೂ ಉತ್ತಮ ಆಲ್​ರೌಂಡ್ ಪ್ರದರ್ಶನ ನೀಡುತ್ತ ಬಂದಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು, ವಿರಾಟ್​ ಕೊಹ್ಲಿ, ರಜತ್ ಪಟಿದಾರ್​, ಫಿಲ್​ ಸಾಲ್ಟ್, ಜೋಸ್​ ಹೆಜಲ್​ವುಡ್​ ಸೇರಿದಂತೆ ಬೌಲಿಂಗ್ ಮತ್ತು ಬ್ಯಾಟಿಂಗ್​ನಲ್ಲಿ ಕ್ರಿಕೆಟ್​ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರೊಟ್ಟಿಗೆ ಲೀಗ್​ನಲ್ಲಿ ಮಿಂಚುತ್ತಿರುವ ಆರ್​ಸಿಬಿ ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಇದು ಫ್ರಾಂಚೈಸಿಯ ಅಭಿಮಾನಿಗಳಲ್ಲಿ 'ಈ ಸಲ ಕಪ್​ ನಮ್ದೇ' ಎಂಬ ವಿಶ್ವಾಸ, ನಂಬಿಕೆಯನ್ನು ಆಳವಾಗಿಸಿದೆ.

ಇಲ್ಲಿಯವರೆಗೆ ಆಡಿರುವ 8 ಪಂದ್ಯಗಳಲ್ಲಿ 5 ಗೆದ್ದು ಮೂರು ಸೋತಿರುವ ಆರ್​ಸಿಬಿ ತವರಿನಲ್ಲಿ ಮುಗ್ಗರಿಸಿ, ಇತರೆ ಮೈದಾನಗಳಲ್ಲಿ ಅಬ್ಬರಿಸಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕೊಂಚ ಗೊಂದಲ, ಬೇಸರ ಮೂಡಿಸಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿಯಲ್ಲಿ ಆಡಿರುವ ಮೂರು ಪಂದ್ಯಗಳನ್ನು ಹೀನಾಯವಾಗಿ ಸೋತಿರುವ ಚಾಲೆಂಜರ್ಸ್​, ಕ್ಯಾಚ್​ ಕೈಚೆಲ್ಲುವುದು, ಫೀಲ್ಡಿಂಗ್​ನಲ್ಲಿ ಎಡವಟ್ಟು ಮಾಡಿಕೊಳ್ಳುವುದು ಸತತ ಸೋಲಿಗೆ ಕಾರಣವಾಗಿದೆ. ಇತರೆ ಫ್ರಾಂಚೈಸಿಗಳ ತವರಿನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಆರ್​ಸಿಬಿ ನಮ್ಮ ತವರಿನಲ್ಲಿ ಏಕೆ ಒಳ್ಳೆಯ ಪ್ರದರ್ಶನ ಕೊಡಲು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳನ್ನು ಬೆಂಬಿಡದೆ ಕಾಡುತ್ತಿದೆ. ಸದ್ಯ ಇದೇ ಈಗ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಸಲಹೆಗೆ ಕಾರಣವಾಗಿದೆ.

ತವರಿನಲ್ಲಿ ಗೆಲುವಿನ ಖಾತೆ ತೆರೆಯದ ಆರ್​ಸಿಬಿಗೆ ಕಿವಿಮಾತು ನೀಡಿರುವ ಅಂಬಟಿ ರಾಯುಡು, "ಆರ್​ಸಿಬಿಗೆ ವಿರಾಟ್​ ಕೊಹ್ಲಿ ಅತ್ಯುತ್ತಮ ಹಾಗೂ ಸ್ಫೋಟಕ ಬ್ಯಾಟರ್​. ಕ್ರೀಸ್​ನಲ್ಲಿ ಕೊಹ್ಲಿ ಕೊನೆಯವರೆಗೂ ಉಳಿಯಬೇಕು. ಅವರೇ ತಂಡಕ್ಕೆ ಬಲ. ಫಿಲ್​ ಸಾಲ್ಟ್​, ರಜತ್ ಪಟಿದಾರ್​ ಮತ್ತು ಜಿತೇಶ್​ ಶರ್ಮ ಕೂಡ ವಿರಾಟ್​ಗೆ ಸಾಥ್ ನೀಡವ ಬ್ಯಾಟರ್​ಗಳು. ಇಲ್ಲಿ ಬ್ಯಾಟಿಂಗ್​ ಅಷ್ಟು ಸುಲಭವಿಲ್ಲ. ಹೀಗಾಗಿ ಒಬ್ಬ ವಿರಾಟ್​ ಕೊನೆಯವರೆಗೂ ನಿಂತು ಆಡಬೇಕು" ಎಂದಿದ್ದಾರೆ. ಅಸಲಿಗೆ ಇಂದಿನ ಪಂದ್ಯದಲ್ಲಿ ಆರ್​ಸಿಬಿ ಗೆಲುವು ಸಾಧಿಸಲಿದೆಯಾ? ಅಥವಾ ಮತ್ತೊಂದು ಸೋಲಿಗೆ ಗುರಿಯಾಗಲಿದೆಯಾ? ಎಂಬುದನ್ನು ಕಾದು ನೋಡಬೇಕು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net