

ಹರಿಯಾಣ: ಒಲಿಂಪಿಕ್ಸ್ನ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿಯ ಪದಕವನ್ನು ಗೆದ್ದು ಹೆಮ್ಮೆ ತಂದಿರುವ ಕುಸ್ತಿಪಟು ರವಿಕುಮಾರ್ ದಾಹಿಯ ಬಗ್ಗೆ ಈಗ ಅವರ ಗ್ರಾಮಸ್ಥರು ಮಾತ್ರವಲ್ಲದೆ ದೇಶಾದ್ಯಂತ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಅವರ ಗ್ರಾಮಸ್ಥರು ರವಿಯ ಗೆಲುವನ್ನು ಅತ್ಯಂತ ವಿಶೇಷ ಎಂದು ವ್ಯಾಖ್ಯಾನಿಸಿದ್ದಾರೆ.
ನಾವು ಈ ಪಂದ್ಯವನ್ನು ನೋಡಿ ತುಂಬಾ ಸಂತೋಷ ಪಟ್ಟಿದ್ದೇವೆ. ರವಿ ಚಿನ್ನ ಗೆದ್ದಿಲ್ಲ ಎಂಬ ಬೇಸರ ನಮಗಿಲ್ಲ. ಯಾವುದೇ ಸಂಪನ್ಮೂಲ ಇಲ್ಲದೆ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. ಹೀಗಾಗಿ ನಮಗೆ ಅದು ಚಿನ್ನಕ್ಕಿಂತಲೂ ಹೆಚ್ಚು. ಈ ಗೆಲುವನ್ನು ಸಾಧಿಸಿರುವ ಅವರನ್ನು ನಾವು ಅದ್ಧೂರಿಯಾಗಿ ಸ್ವಾಗತಿಸುತ್ತೇವೆ ಎಂದು ಹರಿಯಾಣದಲ್ಲಿರುವ ಅವರ ಗ್ರಾಮಸ್ಥರು ವಿಶೇಷವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಒಲಿಂಪಿಕ್ಸ್ ಕುಸ್ತಿ ಸೆಮಿಫೈನಲ್ನಲ್ಲಿ ಕಜಕಸ್ತಾನಿನ ನುರಿಸ್ಲಮ್ ಸನಯೆವ್ ಸೋಲಿಸಿ, ಫೈನಲ್ ತಲುಪಿದ್ದ ರವಿಕುಮಾರ್ ದಾಹಿಯ ಫೈನಲ್ನಲ್ಲಿ ರಷ್ಯಾ ಎದುರಾಳಿ ಜೌರ್ ಉಗ್ಯೂವ್ ಎದುರು ಸೋಲಿಗೀಡಾಗಿ ಚಿನ್ನದ ಪದಕದಿಂದ ವಂಚಿತರಾದರು. ಅದಾಗ್ಯೂ ಅವರು ಬೆಳ್ಳಿ ಪದಕದ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. (ಏಜೆನ್ಸೀಸ್)