

ಬೆಂಗಳೂರು: ''ಕೆಜಿಎಫ್' ಎನ್ನುವುದು ಒಂದು ವಿಶ್ವಾಸ. ಇಷ್ಟು ಖರ್ಚು ಮಾಡಿದರೆ, ಹೀಗೆ ಬರುತ್ತದೆ ಎಂಬ ನಂಬಿಕೆ ಬರುತ್ತದೆ. 'ಕಾಂತಾರ' ಎನ್ನುವುದು ಒಂದು ಎಮೋಷನ್. ಅದೂ ಗೆಲ್ಲುತ್ತದೆ, ಇದೂ ಗೆಲ್ಲುತ್ತದೆ. ಅದು ಗುರಿ ಇದ್ದು ಗೆಲ್ಲುತ್ತದೆ. ಇದು ಗುರಿ ಇಲ್ಲದೆ ಗೆಲ್ಲುತ್ತದೆ. ಆದರೆ, ಪ್ರಮುಖವಾಗಿ ಎರಡರಲ್ಲೂ ಕಾಣುವುದು ಪ್ರಾಮಾಣಿಕತೆ ...
ಹಾಗಂದವರು ರವಿಚಂದ್ರನ್. ಭಾನುವಾರ ರಾತ್ರಿ ನಡೆದ 'ರೆಮೋ' ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಅವರು ಮಾತನಾಡುತ್ತಿದ್ದರು. ಈ ಚಿತ್ರದ ಟ್ರೈಲರ್ ಮತ್ತು ಹಾಡುಗಳನ್ನು ನೋಡಿ ಮೆಚ್ಚಿಕೊಂಡ ಅವರು, ಮೆಚ್ಚುಗೆಯ ಮಾತುಗಳನ್ನಾಡಿದರು. ಅದರಲ್ಲೂ ಚಿತ್ರಕ್ಕೆ ಹಣ ಹೂಡಿದ ನಿರ್ಮಾಪಕ ಸಿ.ಆರ್. ಮನೋಹರ್ ಬಗ್ಗೆ ಖುಷಿಯಿಂದ ಒಂದಿಷ್ಟು ವಿಷಯಗಳನ್ನು ಹೇಳಿದರು.
'ಒಬ್ಬರಿಗೆ ನೋವು ಕೊಟ್ಟರೆ ಗೆಲ್ಲೋಕೆ ಆಗೋದು. ಅವಮಾನ ಮಾಡದೇ ಯಾರೂ ಗೆದ್ದೇ ಇಲ್ಲ ಜೀವನದಲ್ಲಿ. ಅದು ಈ ಟ್ರೈಲರ್ನಲ್ಲಿ ಕಾಣಿಸಿತು. ಅದೇ ಕಥೆಯಾಗಿದ್ದರೆ, ಯಶಸ್ಸು ಕಾಣುವುದಕ್ಕೆ ಈ ಚಿತ್ರದಲ್ಲಿ ಎಲ್ಲವೂ ಇದೆ. ಎಲ್ಲ ಸಿನಿಮಾಗಳಿಗೂ ಮುಖ್ಯವಾಗಿ ಬೇಕಾಗಿರುವುದು ಪ್ರಾಮಾಣಿಕತೆ ಮತ್ತು ಪ್ರೀತಿ. ನನಗೆ ಮನೋಹರ್ ಕಂಡರೆ ಹೊಟ್ಟೆ ಉರಿಯುತ್ತದೆ. ನಾನು ಫಾರಿನ್ಗೆ ನಮ್ಮ ತಾಯಿಯನ್ನು ಕರೆದುಕೊಂಡು ಹೋದಾಗ, ಅವರ ಟಿಕೆಟ್ ಮತ್ತು ಊಟದ ದುಡ್ಡು ಪಡೆದ ನಿರ್ಮಾಪಕರೂ ಇದ್ದಾರೆ. ಆದರೆ, ಇಲ್ಲಿ ಅವರು ತಮ್ಮ ತಂಡದ ಕುಟುಂಬದವರನ್ನು ಫ್ರೀಯಾಗಿ ಕರೆದುಕೊಂಡು ಹೋಗಿದ್ದರಂತೆ. ಇಂಥ ನಿರ್ಮಾಪಕ ನಮಗೆ ಯಾಕೆ ಸಿಗುವುದಿಲ್ಲ' ಎಂದು ಪ್ರಶ್ನಿಸುತ್ತಾರೆ ರವಿಚಂದ್ರನ್.
ಇವತ್ತು ಕನ್ನಡ ಚಿತ್ರರಂಗಕ್ಕೆ ಗಜಕೇಸರಿ ಯೋಗ ಬಂದಿದೆ ಎನ್ನುವ ಅವರು, ಇಂಥ ಹೊತ್ತಿನಲ್ಲಿ ಮನೋಹರ್ ತರಹದ ನಿರ್ಮಾಪಕರು ಬೇಕು ಎನ್ನುತ್ತಾರೆ. 'ನಗುತ್ತಾ ಸಿನಿಮಾ ಮಾಡುವ ನಿರ್ಮಾಪಕರು ಬೇಕು. ನಿರ್ಮಾಪಕರು ಎಷ್ಟು ಖುಷಿಯಿಂದ ಮಾಡುತ್ತಾರೋ, ಚಿತ್ರ ಅಷ್ಟು ದೊಡ್ಡದಾಗಿರುತ್ತದೆ. ನಾವು ಸಿನಿಮಾ ಮಾಡಬಹುದು ಅಷ್ಟೇ. ಗೆಲುವು ನಮ್ಮ ಕೈಯಲ್ಲಿ ಇರುವುದಿಲ್ಲ. ಮನೋಹರ್ 20 ವರ್ಷಗಳ ಹಿಂದೆ ಮೊದಲು ಸಿನಿಮಾ ಮಾಡೋಕೆ ಬಂದಿದ್ದು ನನ್ನ ಜತೆಗೆ. ಅವರ ಸಮಾರಂಭಗಳಿಗೆ ಬರುತ್ತೇನೇ ಹೊರತು, ಅವರ ಜತೆಗೆ ಸಿನಿಮಾ ಮಾಡುವುದಕ್ಕೆ ಸಾಧ್ಯವಾಗಿಲ್ಲ' ಎಂದರು ರವಿಚಂದ್ರನ್.
ಪವನ್ ಒಡೆಯರ್ ನಿರ್ದೇಶನದ 'ರೆಮೋ' ಚಿತ್ರವು ನ. 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇಶಾನ್, ಆಶಿಕಾ ರಂಗನಾಥ್, ಮಧು, ರಾಜೇಶ್ ನಟರಂಗ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.