ರಿಷಭ್​ ಶೆಟ್ರಿಗೆ ಕಮಲ್​ ಹಾಸನ್​ ಪೋನ್​ ಮಾಡಿದ್ರಂತೆ … ಯಾಕೆ ಗೊತ್ತಾ?

Kantara - Kamal Haasan
Published on

ಬೆಂಗಳೂರು: ರಿಷಭ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ 'ಕಾಂತಾರ' ಚಿತ್ರವು ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಪ್ರದರ್ಶನವಾಗುತ್ತಿದೆ. ಈ ಮಧ್ಯೆ, ಕಾಲಿವುಡ್​ನ ಜನಪ್ರಿಯ ನಟ ಕಮಲ್​ ಹಾಸನ್​, ರಿಷಭ್​ ಶೆಟ್ರಿಗೆ ಫೋನ್​ ಮಾಡಿರುವ ಸುದ್ದಿಯೊಂದು ಹೊರಬಿದ್ದಿದೆ.

ಇಷ್ಟಕ್ಕೂ ಕಮಲ್​ ಹಾಸನ್​ ಯಾಕೆ ಪೋನ್​ ಮಾಡಿರಬಹುದು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಮೂಲಗಳ ಪ್ರಕಾರ, 'ಕಾಂತಾರ' ಚಿತ್ರವನ್ನು ಕಮಲ್​ ನೋಡಿದ್ದಾರಂತೆ. ನೋಡಿ ಖುಷಿಯಾದ ಅವರು, ರಿಷಭ್​ಗೆ ಫೊನ್​ ಹಚ್ಚಿದ್ದಾರೆ. ಚಿತ್ರ ಬಹಳ ಚೆನ್ನಾಗಿ ಮಾಡಿದ್ದೀರಾ ಎಂದು ಹೊಗಳುವುದರ ಜತೆಗೆ, ರಿಷಭ್​ರ ಕಥೆ ಹೇಳುವ ಕಲೆ ಬಹಲ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರಂತೆ.

ಇದಕ್ಕೂ ಮೊದಲು, ರಜನಿಕಾಂತ್​ ಸಹ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದರು. ಅದಾಗಿ ಕೆಲವೇ ದಿನಗಳ ನಂತರ ಅವರನ್ನು ಅವರ ಚೆನ್ನೈ ಮನೆಗೆ ಹುಡುಕಿಕೊಂಡು ಹೋಗಿದ್ದರು ರಿಷಭ್​ ಶೆಟ್ಟಿ. ಈ ಸಂದರ್ಭದಲ್ಲಿ ಶೆಟ್ರಿಗೆ ಆಶೀರ್ವಾದ ಮಾಡುವುದಷ್ಟೇ ಅಲ್ಲ, ಚಿನ್ನದ ಸರ ಹಾಕಿ ಕಳುಹಿಸಿದ್ದರು. ಈಗ ಕಮಲ್​ ಹಾಸನ್​ ಸಹ ಮೆಚ್ಚಿ ಮಾತನಾಡಿದ್ದಾರೆ. ಅದಲ್ಲದೆ ಸುದೀಪ್​, ಪ್ರಭಾಸ್​, ಕಂಗನಾ ರಣಾವತ್​ ಸೇರಿದಂತೆ ಹಲವರು 'ಕಾಂತಾರ' ಮೂಡಿಬಂದಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

'ಕಾಂತಾರ' ಚಿತ್ರವು ಜಗತ್ತಿನಾದ್ಯಂತ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದ್ದು, ಈ ಪೈಕಿ ಭಾರತದಲ್ಲೇ 900 ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ ಎಂದು ಹೇಳಲಾಗುತ್ತಿದೆ/ ಭಾರತವಷ್ಟೇ ಅಲ್ಲ, ಆಸ್ಟ್ರೇಲಿಯಾ, ಯುಕೆ, ಕೆನಡಾ, ಯುಎಇ, ಅಮೆರಿಕಾ ಮುಂತಾದ ಕಡೆಗಳಲ್ಲೂ ಚಿತ್ರ ಯಶಸ್ವಿ 50 ದಿನಗಳನ್ನು ಮುಗಿಸಿದೆ.

'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್​ನ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದು, ರಿಷಭ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್​, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಮುಂತಾದವರು ಅಭಿನಯಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net