

ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟು ಸದ್ಯ ಬಹುಬೇಡಿಕೆಯ ನಟಿ ಎನ್ನಿಸಿಕೊಂಡಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚಿನ ದಿನಗಳಲ್ಲಿ ಮುಟ್ಟಿದೆಲ್ಲಾ ಚಿನ್ನವಾಗುತ್ತಿದೆ. ಅವರ ನಟನೆಯ ಛಾವಾ ಸಿನಿಮಾವು 400 ಕೋಟಿ ರೂಪಾಯೊಇ ಬಾಚುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದು, ಪಠಾಣ್ ಹಾಗೂ ಗದ್ದರ್ ಚಿತ್ರದ ದಾಖಲೆಗಳನ್ನು ಮುರಿಯುವ ಸನಿಹದಲ್ಲಿದೆ.
ಛಾವಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ರಶ್ಮಿಕಾ ಮಂದಣ್ನ (Rashmika Mandanna) ಅವರ ಪಾತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದ್ದು, ಛತ್ರಪತಿ ಸಾಂಭಾಜಿ ಮಹಾರಾಜ್ ಅವರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ನಟಿ ಮಿಂಚು ಹರಿಸಿದ್ಧಾರೆ. ಚಿತ್ರದ ಪ್ರಮೋಷನ್ ನಡುವೆಯೇ ರಶ್ಮಿಕಾ ಮಂದಣ್ಣ ತಮ್ಮ ತಂಗಿಯ ಬಗ್ಗೆ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರಶ್ಮಿಕಾ, ನನಗೆ 10 ವರ್ಷ ವಯಸ್ಸಿನ ಒಬ್ಬ ಚಿಕ್ಕ ತಂಗಿ ಇದ್ದಾಳೆ, ಆದ್ದರಿಂದ ನಮ್ಮ ನಡುವೆ ಸುಮಾರು 16 ವರ್ಷಗಳ ಅಂತರವಿದೆ. ಆಕೆ ನನ್ನ ಸಹೋದರಿ ಎಂದು ಯಾರು ಬಹಿರಂಗಪಡಿಸಬಾರದು ಏಕೆಂದರೆ ಆಕೆ ಕೇಳಿದ್ದನ್ನು ಪಡೆದುಕೊಳ್ಳಬಹುದು. ಅವಳಿಗೆ ಅದು ಸಿಗೋಕೆ ನನಗೆ ಇಷ್ಟ ಇಲ್ಲ. ಬಾಲ್ಯದಲ್ಲಿ ನಾನು ಹೇಗೆ ಇದ್ದೆನೋ ಅದೇ ವಾತಾವರಣ ಅವಳಿಗೂ ಸಿಗಬೇಕು. ಆ ವಾತಾವರಣ ಸಿಕ್ಕಿದ್ದರಿಂದಲೇ ನಾನು ಈಗ ಹೀಗೆ ಇದ್ದೇನೆ. ನಾನು ಭದ್ರತೆ, ಕಂಫರ್ಟ್ನ ಕೊಡಬಹುದು, ಆದರೆ ಐಷಾರಾಮಿ ಸವಲತ್ತುಗಳನ್ನು ಆಕೆಗೆ ನೀಡಲಾರೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಛಾವಾ ಯಶಸ್ಸಿನಲ್ಲಿ ತೇಲುತ್ತಿರುವ ನಟಿ ರಶ್ಮಿಕಾ ಅವರ ನಟನೆಯ ಸಿಕಂದರ್ ಹಾಗೂ ಧನುಷ್, ನಾಗಾರ್ಜುನ ಜೊತೆ ನಟಿಸಿರುವ ಕುವೇರ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ತೆಲುಗು ಮತ್ತು ತಮಿಳಿನ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸದ್ಯ ಯಶಸ್ಸಿನ ಉತ್ತುಂಗದಲ್ಲಿ ನಟಿ ತೇಲುತ್ತಿದ್ದಾರೆ.