

ಬೆಂಗಳೂರು: 2024-25 ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ (PUC) ಪರೀಕ್ಷೆ ಇಂದಿನಿಂದ (ಮಾರ್ಚ್ 01) ಆರಂಭವಾಗಿದ್ದು, ಮಾರ್ಚ್ 20ರವರೆಗೆ ನಡೆಯಲಿದೆ. ರಾಜ್ಯದ 1171 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 76 ಉತ್ತರ ಪತ್ರಿಕೆ ಮೌಲ್ಯಮಾಪನ ಕೇಂದ್ರಗಳು ಹಾಗೂ 31,000 ಶಿಕ್ಷಕರನ್ನ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಶಿಕ್ಷಣ ಇಲಾಖೆ ಮತ್ತು ಎಕ್ಸಾಂ ಬೋರ್ಡ್ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
7,13,862 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 6,61,474 ಹೊಸ ವಿದ್ಯಾರ್ಥಿಗಳು, 34,071 ಪುನರಾವರ್ತಿತ ವಿದ್ಯಾರ್ಥಿಗಳು, 18,317 ಖಾಸಗಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ (PUC) ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಅಕ್ರಮ ತಡೆಗೆ ಮೊದಲ ಬಾರಿಗೆ ವೆಬ್ ಕಾಸ್ಟಿಂಗ್ ಕಣ್ಗಾವಲು ಇರಲಿದ್ದು, ಪರೀಕ್ಷಾ ಕೊಠಡಿಯೊಳಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೊಬೈಲ್, ಎಲೆಕ್ಟ್ರಾನಿಕ್ ವಾಚ್, ಕ್ಯಾಲುಕೇಟರ್ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಾಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಸಾಮಾನ್ಯ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವನ್ನು ರಾಜ್ಯ ಸರ್ಕಾರ ಮಾಡಿಕೊಟ್ಟಿದೆ.