

ನವದೆಹಲಿ: ರಶೀದ್ ಖಾನ್ ಹಾಲಿ ಕ್ರಿಕೆಟ್ ಯುಗದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ. ಅದರಲ್ಲೂ ಟಿ20 ಕ್ರಿಕೆಟ್ನಲ್ಲಿ ಶ್ರೇಷ್ಠ ಬೌಲರ್ಗಳ ಸಾಲಿನಲ್ಲಿ ನಿಲ್ಲುತ್ತಾರೆ. 21 ವರ್ಷದ ರಶೀದ್ ಖಾನ್, ಟಿ20 ಕ್ರಿಕೆಟ್ನಲ್ಲಿ ಈಗಾಗಲೇ 296 ವಿಕೆಟ್ ಕಬಳಿಸಿದ್ದಾರೆ. ಈಗಾಗಲೇ ರಾಷ್ಟ್ರೀಯ ಟೆಸ್ಟ್ ತಂಡ ಮುನ್ನಡೆಸಿದ ಜವಾಬ್ದಾರಿ ಹೊಂದಿರುವ ರಶೀದ್ ಖಾನ್ ತಮ್ಮ ದೊಡ್ಡ ಕನಸು ಹಾಗೂ ಸವಾಲೊಂದನ್ನು ಹೊರಹಾಕಿದ್ದಾರೆ. ಅಫ್ಘಾನಿಸ್ತಾನದ ತಂಡ ವಿಶ್ವಕಪ್ ಜಯಿಸಿದ ಬಳಿಕವೇ ಮದುವೆಯಾಗುವುದಾಗಿ ಈ ಯುವ ಆಟಗಾರ ಶಪಥ ಮಾಡಿದ್ದಾರೆ.
ಅಫ್ಘಾನಿಸ್ತಾನ ತಂಡದ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ರಶೀದ್ ಖಾನ್. ಪ್ರತಿಷ್ಠಿತ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ದುಬಾರಿ ಮೊತ್ತಕ್ಕೆ ಸೇಲಾಗಿರುವ ಅವರು, ಐಪಿಎಲ್ ಅಲ್ಲದೆ, ಬಾಂಗ್ಲಾದೇಶ ಪ್ರೀಮಿಯರ್ ಲೀಗ್, ಬಿಗ್ಬಾಷ್ ಲೀಗ್, ಮಾನ್ಸಿ ಸೂಪರ್ ಲೀಗ್ ಸೇರಿದಂತೆ ಹಲವು ಟಿ20 ಲೀಗ್ನಲ್ಲಿ ಸ್ಟಾರ್ ಆಟಗಾರನಾಗಿ ಮಿಂಚುತ್ತಿದ್ದಾರೆ. 2015ರಲ್ಲಿ ರಾಷ್ಟ್ರೀಯ ತಂಡದ ಪರ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ರಶೀದ್ ಖಾನ್, 2019ರ ಏಕದಿನ ವಿಶ್ವಕಪ್ ತಂಡದ ಭಾಗವಾಗಿದ್ದರು. ಆದರೆ, ಗುಲ್ಬಾದಿನ್ ನೈಬ್ ಸಾರಥ್ಯದ ಅಫ್ಘಾನಿಸ್ತಾನ ತಂಡ ಲೀಗ್ ಹಂತದಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲೂ ಸೋತಿತ್ತು. ರಶೀದ್ ಖಾನ್ ಇದುವರೆಗೂ 4 ಟೆಸ್ಟ್ ಪಂದ್ಯಗಳಿಂದ 23 ವಿಕೆಟ್, 71 ಏಕದಿನ ಪಂದ್ಯಗಳಿಂದ 133 ವಿಕೆಟ್, 48 ಟಿ20 ಪಂದ್ಯಗಳಿಂದ 89 ವಿಕೆಟ್ ಕಬಳಿಸಿದ್ದಾರೆ.
ಕಳೆದ ಮಾರ್ಚ್ ತಿಂಗಳಿಂದ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಇರುವ ರಶೀದ್ ಖಾನ್, ಭಾರತದಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಸರಣಿಯೇ ಕಡೇ ಟೂನಿರ್ಯಾಗಿದೆ. ಬಳಿಕ ಐಪಿಎಲ್ನಲ್ಲಿ ಆಡಬೇಕಿತ್ತು. ಆದರೆ, ಕರೊನಾ ವೈರಸ್ ಭೀತಿಯಿಂದಾಗಿ ಐಪಿಎಲ್ ಅನಿದಿರ್ಷ್ಟಾವಧಿವರೆಗೆ ಮುಂದೂಡಿಕೆಯಾಗಿದೆ.