ಈತನನ್ನು ನೋಡಿ ಕಲಿಯಬೇಕು ರಶೀದ್​ ಖಾನ್​! ಸ್ಪಿನ್​ ಬೌಲರ್​ಗೆ ಖಡಕ್ ಎಚ್ಚರಿಕೆ ಕೊಟ್ಟ ಮಾಜಿ ಕ್ರಿಕೆಟಿಗ | IPL 2025

ವಿಜಯವಾಣಿ - 2025-04-03T164134.474
Published on

IPL 2025: ಏ.02ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಶುಭಮನ್​ ಗಿಲ್​ ಪಡೆ, 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಆರ್​ಸಿಬಿಯನ್ನು ತವರಿನ್ನಲ್ಲೇ ಮಣಿಸಿದ ಖುಷಿಯನ್ನು ವ್ಯಕ್ತಪಡಿಸಿದ ಜಿಟಿ, ಮುಂಬರುವ ಪಂದ್ಯಗಳನ್ನು ಸಹ ಗೆದ್ದು ಬೀಗುವ ಉತ್ಸಾಹವನ್ನು ತೋರಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ. ತಮ್ಮ ಬಲಿಷ್ಠ ಬೌಲಿಂಗ್ ದಾಳಿಯಿಂದ ಬೆಂಗಳೂರು ಬ್ಯಾಟರ್​ಗಳನ್ನು ಕಟ್ಟಿಹಾಕಿದ ಮೊಹಮ್ಮದ್​ ಸಿರಾಜ್​, ಬರೋಬ್ಬರಿ ಮೂರು ವಿಕೆಟ್​ಗಳನ್ನು ಕಬಳಿಸಿ, ತಂಡದ ಪರ ಮಿಂಚಿದರು. ವೇಗಿಗಳ ಪೈಕಿ ಸಿರಾಜ್​, ಪ್ರಸಿದ್ಧ್ ಕೃಷ್ಣ ಅದ್ಭುತ ಪ್ರದರ್ಶನ ನೀಡಿದರೆ, ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಸ್ಪಿನ್​ ಮಾಂತ್ರಿಕನೇ ಹೆಚ್ಚುವರಿ ರನ್​ ಕೊಟ್ಟಿದ್ದು ಮ್ಯಾನೇಜ್​ಮೆಂಟ್​ ಹಾಗೂ ಜಿಟಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಯಿತು. ಸದ್ಯ ಇದೇ ವಿಷಯ ಮಾಜಿ ಕ್ರಿಕೆಟಿಗನನ್ನು ಕೆರಳಿಸಿದೆ.

ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ರಶೀದ್​ ಖಾನ್​, ತಮ್ಮ ತಂಡದಲ್ಲಿ ಆಡುತ್ತಿದ್ದಾರೆ ಎಂದರೆ ಅವರ ಮೇಲಿನ ನಿರೀಕ್ಷೆಗಳು ಎಂದಿಗಿಂತ ದುಪ್ಪಟ್ಟಾಗಿಯೇ ಇರುತ್ತದೆ. ಆದರೆ, ನಿನ್ನೆಯ ಪಂದ್ಯದಲ್ಲಿ ಆ ಮ್ಯಾಜಿಕ್ ಕ್ಷಣಗಳು ಇರದೆ ಕೇವಲ ಸಪ್ಪೆ ಪ್ರದರ್ಶನ ನೀಡಿದ್ದು, ಇದೀಗ ಭಾರೀ ಬೇಸರಕ್ಕೆ ಕಾರಣವಾಗಿದೆ. ಈ ಕುರಿತು ಮಾತನಾಡಿರುವ ಮಾಜಿ ಹಿರಿಯ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, "ತಮ್ಮದೇ ತಂಡದಲ್ಲಿರುವ ಸಾಯಿ ಕಿಶೋರ್​ನನ್ನು ನೋಡಿ ರಶೀದ್​ ಕಲಿಯಬೇಕು. ತನ್ನ 4 ಓವರ್​ನಲ್ಲಿ ಸಾಯಿ 22 ರನ್​ ಕೊಟ್ಟು, ಎರಡು ವಿಕೆಟ್​ಗಳನ್ನು ಕಬಳಿಸಿದ್ದಾರೆ. ಆದರೆ, ನೀವು?" ಎಂದು ಪ್ರಶ್ನಿಸಿದರು.

"ಅಂತಹ ವಿಕೆಟ್​ಗಳನ್ನು ಕಬಳಿಸುವ ಕೌಶಲ್ಯದ ಬೌಲಿಂಗ್​ನತ್ತ ರಶೀದ್​ ಗಮನ ಹರಿಸಬೇಕು. ವೇಗವಾಗಿ ಸ್ಪಿನ್​ ಮಾಡುವುದರ ಜತೆಗೆ ಹೆಚ್ಚು ಗೂಗ್ಲಿ ಹಾಕಿದರೆ, ಬ್ಯಾಟರ್​ಗಳು ಸುಲಭವಾಗಿ ಡಿಕೋಡ್​ ಮಾಡುತ್ತಾರೆ. ಅದರಲ್ಲೂ ರಶೀದ್​ ಹಾಕುವ ಎಸೆತದ ಬಗ್ಗೆ ಬ್ಯಾಟರ್​ಗಳು ಮುಂಚಿತವಾಗಿಯೇ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಈ ವಿಷಯದಲ್ಲಿ ರಶೀದ್​ ಖಾನ್​ ಎಚ್ಚರವಹಿಸಬೇಕು. ವಿಕೆಟ್​ ಕೀಳಲು ಮಂದಗತಿಯ ಸ್ಪಿನ್​ ಅಗತ್ಯವಿದೆ" ಎಂದರು,(ಏಜೆನ್ಸೀಸ್). ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net