

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳರ ಪರ ಹಾಗೂ ಬಿಜೆಪಿ ವಿರುದ್ಧವಾದ ಪ್ರತಿಭಟನೆಯಲ್ಲಿ ಲಕ್ಷ್ಮಿ ಪಾಟೀಲ ಎಂಬುವಳು ಹಡಪದ ಸಮಾಜಕ್ಕೆ ಅವಮಾನವಾಗುವ ಪದ ಬಳಕೆ ಮಾಡಿದ್ದು, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಮುಖಂಡರು ಎಸ್‌ಪಿ ಲಕ್ಷ್ಮಣ ನಿಂಬರಗಿಗೆ ಗುರುವಾರ ಮನವಿ ಸಲ್ಲಿಸಿದರು.
ಬಸವನಬಾಗೇವಾಡಿಯಲ್ಲಿ ಈಚೆಗೆ ಜರುಗಿದ ಪ್ರತಿಭಟನೆಯಲ್ಲಿ ಲಕ್ಷ್ಮಿ ಪಾಟೀಲ ಎಂಬುವರು ಹಡಪದ ಸಮಾಜಕ್ಕೆ ಸಂಬಂಧಪಟ್ಟ ಸರ್ಕಾರದ ನಿಷೇಧಿತ ಪದ ಬಳಸಿದ್ದಾರೆ. ಇದು ಕಾನೂನು ಬಾಹಿರವಾಗಿದೆ. ಇವರು ಬಳಸಿದ ನಿಷೇಧಿತ ಪದವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಿಂದ ಹಡಪದ ಸಮಾಜಕ್ಕೆ ನೋವುಂಟಾಗಿದೆ ಹಾಗೂ ಮುಜುಗರವನ್ನುಂಟು ಮಾಡಿದೆ. ನಿಷೇಧಿತ ಪದವನ್ನು ಯಾವುದೇ ಸಂದರ್ಭಕ್ಕೆ ಬಳಸಿದರೆ ಅದು ಕಾನೂನು ಬಾಹಿರವಾಗುತ್ತದೆ. ಹೀಗಾಗಿ ಕೂಡಲೇ ಲಕ್ಷ್ಮಿ ಪಾಟೀಲ ಮೇಲೆ ಕ್ರಮ ಕೈಗೊಳ್ಳಬೇಕೆಂದರು.
ಹಡಪದ ಸಮಾಜವು ಕಾಯಕ ನಿಷ್ಠೆಯೊಂದಿಗೆ ತಮ್ಮ ಉಪಜೀವನವನ್ನು ಕಂಡುಕೊಂಡಿದೆ. ಇಂತಹ ಕಾಯಕ ನಿಷ್ಠೆ ಹೊಂದಿದ ಸಮಾಜದ ಕುರಿತು ನಿಷೇಧಿತ ಪದ ಬಳಸುವುದು ಕಾನೂನಿಗೆ ವಿರುದ್ಧವಾಗಿದೆ. ಇವರು ನುಡಿದ ಈ ನಿಷೇಧಿತ ಪದದಿಂದ ಇಡೀ ಸಮಾಜವು ತಲೆ ತಗ್ಗಿಸುವಂತಾಗಿದೆ. ಹಡಪದ ಸಮಾಜವು ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಹಿಂದುಳಿದ ಸಮಾಜವಾಗಿದೆ. ಲಕ್ಷ್ಮಿ ಪಾಟೀಲ ಇವಳು ನಮ್ಮ ಸಮಾಜದ ಕುರಿತು ಈ ರೀತಿ ಮಾತನಾಡುವುದಕ್ಕೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದರು.
ಜಿಲ್ಲಾಧ್ಯಕ್ಷ ವಿರುಪಾಕ್ಷಿ ಜಿ.ಕತ್ನಳ್ಳಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಡಪದ (ಉತ್ನಾಳ), ಜಿಲ್ಲಾ ಉಪಾಧ್ಯಕ್ಷ ಬಾಬು ಹಡಪದ, ನಿಂಗಪ್ಪ ನಾವಿ, ಮಲ್ಲೇಶಿ ನಾವಿ, ಕಾಶೀಬಾಯಿ ಹಡಪದ, ಸಂಜೀವ ಶಿವಣಗಿ, ರುದ್ರೇಶ ಹಡಪದ, ಶರಣಬಸು ಹಡಪದ, ಚಿದಾನಂದ ತೊರವಿ, ಬಸವರಾಜ ಹಡಪದ (ಬ್ಯಾಲ್ಯಾಳ), ಮಹಾರಾಜ್ ಹಡಪದ, ಅಶೋಕ ಹಡಪದ ಮತ್ತಿತರರಿದ್ದರು.