

ಸಿನಿಮಾ ನಟ-ನಟಿಯರೆಲ್ಲಾ ಒಂದಲ್ಲ ಒಂದು ಹಂತದಲ್ಲಿ ನಿರ್ಮಾಣಕ್ಕಿಳಿಯುವುದು ಸಹಜ. ಈಗಾಗಲೇ ಬಾಲಿವುಡ್ನಲ್ಲಿ ಹಲವು ನಾಯಕ-ನಾಯಕಿಯರು ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಶಾರೂಖ್ ಖಾನ್, ಸಲ್ಮಾನ್ ಖಾನ್, ಅನುಷ್ಕಾ ಶರ್ಮಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ನಿರ್ಮಾಣದಲ್ಲಿ ಸಕ್ರಿಯರಾಗಿದ್ದಾರೆ.
ಚಿತ್ರರಂಗಕ್ಕೆ ಇತ್ತೀಚೆಗೆ ಬಂದವರೆಲ್ಲಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಿರುವಾಗ, ರಣವೀರ್ ಸಿಂಗ್ ಮಾತ್ರ ತಮಗೆ ನಿರ್ಮಾಣ ಬೇಡ ಎಂದು ದೂರವಿದ್ದರು. ಕೇಳಿದಾಗಲೆಲ್ಲಾ ತಮಗೆ ಬ್ಯುಸಿನೆಸ್ ತಲೆ-ಬುಡ ಅರ್ಥವಾಗುವುದಿಲ್ಲ ಎಂದು ಹೇಳಿಕೊಳ್ಳುತ್ತಿದ್ದರು. ಈಗ ಅವರು ಸದ್ದಿಲ್ಲದೆ ಒಂದು ಪ್ರೊಡಕ್ಷನ್ ಕಂಪನಿಯೊಂದನ್ನು ಶುರು ಮಾಡಿರುವ ಸುದ್ದಿ ಇದೆ.
ಇದನ್ನೂ ಓದಿ: ಅರ್ನಬ್ ಗೋಸ್ವಾಮಿ ಬಗ್ಗೆ ಚಿತ್ರ ಮಾಡ್ತಾರಂತೆ ವರ್ಮಾ!
ಈ ಕಂಪನಿ ಹೊಸದಾಗಿ ಶುರುವಾಗಿದ್ದೇನೂ ಅಲ್ಲ, ಸುಮಾರು ಮೂರು ವರ್ಷಗಳ ಹಿಂದೆಯೇ ರಣವೀರ್, ಒಂದು ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದಾರೆ. ಆದರೆ, ಇದುವರೆಗೂ ಯಾವುದೇ ಹೊಸ ಚಿತ್ರವನ್ನೂ ಅದರಿಂದ ನಿರ್ಮಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಆ ಕಂಪನಿಯಿಂದ ಹೊಸ ಚಿತ್ರ ನಿರ್ಮಿಸುವ ಸಾಧ್ಯತೆ ಇದೆ.
ಇಷ್ಟಕ್ಕೂ ಆ ಪ್ರೊಡಕ್ಷನ್ ಕಂಪನಿ ಹೆಸರೇನು ಗೊತ್ತಾ? ಮಾ ಕಸಮ್ ಪ್ರೊಡಕ್ಷನ್ಸ್. ಎಲ್ಲರಿಗೂ ಗೊತ್ತಿರುವಂತೆ, ರಣವೀರ್ ಒಬ್ಬ ವರ್ಣರಂಜಿತ ವ್ಯಕ್ತಿ. ಅವರೊಬ್ಬ ಮಾಸ್ ಹೀರೋ. ಏನು ಮಾಡಿದರೂ ಅವರು ಫಿಲ್ಮಿಯಾಗಿಯೇ ಮಾಡುತ್ತಾರೆ ಮತ್ತು ಈ ಚಿತ್ರದ ಹೆಸರನ್ನೂ ಅವರು ಬಹಳ ಫಿಲ್ಮಿಯಾಗಿಯೇ, ಅದರಲ್ಲೂ ಸಖತ್ ಕಮರ್ಷಿಯಲ್ ಆಗಿ ಇಟ್ಟಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಮಾ ಕಸಮ್ (ತಾಯಾಣೆ) ಎನ್ನುವುದು ಬಾಲಿವುಡ್ನ ಕಮರ್ಷಿಯಲ್ ಚಿತ್ರಗಳಲ್ಲಿ ಹೆಚ್ಚು ಕೇಳಿ ಬರುವ ಪದ. ಈಗ ಅಂಥದ್ದೇ ಹೆಸರನ್ನು ರಣವೀರ್ ತಮ್ಮ ಚಿತ್ರಕ್ಕೆ ಇಟ್ಟಿರುವುದು ವಿಶೇಷ.
ಅಂದಹಾಗೆ, ಈ ಸಂಸ್ಥೆಯಡಿ ಮುಂದಿನ ದಿನಗಳಲ್ಲಿ ಒಂದಿಷ್ಟು ಹೊಸ ಕಮರ್ಷಿಯಲ್ ಚಿತ್ರಗಳನ್ನು ನಿರ್ಮಾಣ ಮಾಡುವ ಯೋಚನೆಯಲ್ಲಿದ್ದಾರೆ. ಇದಲ್ಲದೆ ಇಂಕಿಂಕ್ ಎಂಬ ಇನ್ನೊಂದು ಸಂಸ್ಥೆಯ ಜತೆಗೆ ಅವರು ಪಾಲುದಾರರಾಗಿದ್ದಾರೆ. ಅಷ್ಟೇ ಅಲ್ಲ, ಹೆಂಡತಿ ದೀಪಿಕಾ ಪಡುಕೋಣೆ ಜತೆಗೆ ಸೇರಿ ಚಾಕ್ ಅಂಡ್ ಚೀಸ್ ಎಂಟರ್ಪ್ರೈಸಸ್ ಎಂಬ ಸಂಸ್ಥೆಯನ್ನೂ ಪ್ರಾರಂಭಿಸಿದ್ದಾರೆ.
ಮುಂದಿನ ದಿನಗಳಲ್ಲಿ ರಣವೀರ್ ಈ ಎಲ್ಲಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದ್ದು, ಯಾವೆಲ್ಲಾ ಸಿನಿಮಾಗಳು ಅವರ ಸಂಸ್ಥೆಯಡಿ ನಿರ್ಮಾಣವಾಗುತ್ತವೆ ಎಂಬ ಕುತೂಹಲ ಎಲ್ಲರಿಗೂ ಇದೆ.