

ಟಾಲಿವುಡ್ನ ಹಿಟ್ ಚಿತ್ರಗಳ ನಿರ್ದೇಶಕ ಕೊರಟಾಲ ಶಿವ ಇದೀಗ ಟಾಲಿವುಡ್ನಲ್ಲಿ ಹೊಸ ದಾಖಲೆ ಬರೆಯುವುದಕ್ಕೆ ಹೊರಟಿದ್ದಾರೆ. ಇದುವರೆಗೂ ಟಾಲಿವುಡ್ನಲ್ಲಿ ಎಸ್.ಎಸ್. ರಾಜಮೌಳಿ ಅವರೇ ಅತ್ಯಂತ ಹೆಚ್ಚು ಸಂಭೌವನೆ ಪಡೆಯುವ ನಿರ್ದೇಶಕ ಎಂದು ಹೇಳಲಾಗಿತ್ತು. ಈ ದಾಖಲೆಯನ್ನು ಇದೀಗ ಕೊರಟಾಲ ಶಿವ ಮುರಿಯುವುದಕ್ಕೆ ಹೊರಟಿದ್ದಾರೆ.
ರಾಜಮೌಳಿ ಸದ್ಯಕ್ಕೆ ಒಂದು ಚಿತ್ರಕ್ಕೆ 25 ಕೋಟಿಯವರೆಗೂ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಇದೀಗ ಅದಕ್ಕಿಂತ ಹೆಚ್ಚು ಸಂಭಾವನೆ ಪಡೆಯುವ ಮೂಲಕ, ಕೊರಟಾಲ ಶಿವ ಅವರ ಟಾಲಿವುಡ್ನ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ.
ಸದ್ಯ ಚಿರಂಜೀವಿ ಅಭಿನಯದ 'ಆಚಾರ್ಯ' ಚಿತ್ರವನ್ನು ನಿರ್ದೇಶಿಸುತ್ತಿರುವ ಕೊರಟಾಲ ಶಿವ, ಅಲ್ಲು ಅರ್ಜುನ್ ಅಭಿನಯದಲ್ಲಿ ಒಂದು ಚಿತ್ರ ಮಾಡುವುದಾಗಿ ಇತ್ತೀಚೆಗಷ್ಟೇ ಘೋಷಿಸಿದ್ದಾರೆ. ಈ ಚಿತ್ರ ಪ್ರಾರಂಭವಾಗುವುದೇನಿದ್ದರೂ, 'ಆಚಾರ್ಯ' ಮುಗಿದ ನಂತರವಷ್ಟೇ. ಇನ್ನು ಬಿಡುಗಡೆಯಂತೂ 2022ಕ್ಕೆ.
ಈ ಚಿತ್ರಕ್ಕೆ ಶಿವ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 30 ಕೋಟಿ ಎಂದು ಹೇಳಲಾಗುತ್ತಿದೆ. ಸಂಭಾವನೆ ಎಂದರೆ ಆ ಮೊತ್ತ ಒಂದೇ ಬಾರಿ ಅವರ ಅಕೌಂಟ್ಗೆ ಬಂದು ಬೀಳುತ್ತದೆ ಎಂದಲ್ಲ. ಈ ಚಿತ್ರದಲ್ಲಿ ಅಲ್ಲು ಅರ್ಜುನ್, ಶಿವ ಮತ್ತು ನಿರ್ಮಾಪಕರು ಒಂದು ಒಪ್ಪಂದಕ್ಕೆ ಬಂದಿದ್ದಾರಂತೆ.
ಅದರ ಪ್ರಕಾರ, ಈ ಚಿತ್ರದ ವಿಷಯ ಒಂದು ಒಪ್ಪಂದವಾಗಿದೆಯಂತೆ. ಅದರ ಪ್ರಕಾರ, ಈ ಚಿತ್ರದಲ್ಲಿ ಬರುವ ಲಾಭದಲ್ಲಿ ಅಲ್ಲು ಅರ್ಜುನ್, ನಿರ್ದೇಶಕ ಶಿವ ಮತ್ತು ನಿರ್ಮಾಪಕ ಸುಧಾಕರ್ ಮಿಕ್ಕಿಲನೇನಿ ... ಈ ಮೂವರೂ 33 ಪರ್ಸೆಂಟ್ ಹಣವನ್ನು ಹಂಚಿಕೊಳ್ಳುತ್ತಾರಂತೆ. ಚಿತ್ರಕ್ಕೆ ಶಿವ ಎಂಟು ಕೋಟಿಯಷ್ಟು ಸಂಭಾವನೆಯನ್ನು ಪಡೆಯುತ್ತಿದ್ದಾರಂತೆ. ಇನ್ನು ಬರುವ ಲಾಭವನ್ನು ಲೆಕ್ಕ ಹಾಕಿದರೆ, ಈ ಮೊತ್ತ 30 ಕೋಟಿಯವರೆಗೂ ಆಗುತ್ತದೆ ಎಂದು ಹೇಳಲಾಗುತ್ತಿದೆ.
ಹಾಗೆ ನೋಡಿದರೆ, ಅಲ್ಲು ಅರ್ಜುನ್ಗೆ ತುಂಬಾ ದೊಡ್ಡ ಹಣ ಸಿಗುವುದಿಲ್ಲವಂತೆ. ಆದರೆ, ಹಣಕ್ಕಿಂತ ಒಂದು ದೊಡ್ಡ ಯಶಸ್ಸಿಗಾಗಿ ಎದುರು ನೋಡುತ್ತಿರುವ ಅಲ್ಲು ಅರ್ಜುನ್, ಅಂಥದ್ದೊಂದು ಯಶಸ್ಸನ್ನು ಶಿವ ತುಂದುಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಅದೇ ಕಾರಣಕ್ಕೆ, ಸ್ವಲ್ಪ ದುಡ್ಡು ಕಡಿಮೆಯಾದರೂ ಪರವಾಗಿಲ್ಲ, ದೊಡ್ಡ ನಿರ್ದೇಶಕರೇ ತನ್ನ ಚಿತ್ರ ನಿರ್ದೇಶಿಸಬೇಕು ಎಂದು ಕಾದು, ಅವರಿಂದ ಚಿತ್ರ ಮಾಡಿಸುತ್ತಿದ್ದಾರೆ.