

ನವದೆಹಲಿ: ಮೂರು ಪ್ರಕಾರದಲ್ಲಿ ಎರಡು ದೇಶ ಪ್ರತಿನಿಧಿಸಿದ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡಿರುವ ಬಾಯ್ಡ್ ರ್ಯಾಂಕಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ರ್ಯಾಂಕಿನ್ ಇಂಗ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳನ್ನು ಪ್ರತಿನಿಧಿಸಿದ್ದರು. ರ್ಯಾಂಕಿನ್ 2020ರಲ್ಲಿ ಕಡೇ ಬಾರಿಗೆ ಐರ್ಲೆಂಡ್ ಪರ ಭಾರತದ ನೋಯ್ಡಾದಲ್ಲಿ ಅಫ್ಘಾನಿಸ್ತಾನದ ಎದುರು ಟಿ20 ಪಂದ್ಯವಾಡಿದ್ದರು. 36 ವರ್ಷದ ರ್ಯಾಂಕಿನ್ 2013-14ನೇ ಸಾಲಿನಲ್ಲಿ ಕಡೇ ಬಾರಿಗೆ ಇಂಗ್ಲೆಂಡ್ ಪರ ಅಶಸ್ ಸರಣಿ ಆಡಿದ್ದರು. ಅದೇ ಪ್ರವಾಸದಲ್ಲಿ 7 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನಾಡಿದ್ದರು.
2017ರಲ್ಲಿ ಟೆಸ್ಟ್ ಮಾನ್ಯತೆ ದಕ್ಕಿದ ಬಳಿಕ ಐರ್ಲೆಂಡ್ ತಂಡಕ್ಕೆ ವಾಪಸಾದರು. ಬಾಯ್ಡ್ ರ್ಯಾಂಕಿನ್ ಒಟ್ಟಾರೆ, 3 ಟೆಸ್ಟ್, 75 ಏಕದಿನ ಹಾಗೂ 50 ಟಿ20 ಪಂದ್ಯಗಳನ್ನಾಡಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ ಎರಡು ದೇಶಗಳ ಪರ ಟೆಸ್ಟ್ ಆಡಿದ ವಿಶ್ವದ 15 ಆಟಗಾರರ ಪೈಕಿ ಒಬ್ಬರಾಗಿದ್ದರೆ, ಮೂರು ಪ್ರಕಾರಗಳಲ್ಲಿ ಎರಡು ದೇಶ ಪ್ರತಿನಿಧಿಸಿದ ಏಕೈಕ ಆಟಗಾರ ಎನಿಸಿದ್ದಾರೆ. 11 ವರ್ಷಗಳ ಕಾಲ ವಾರ್ವಿಕ್ಷೈರ್ ಪರ ಕೌಂಟಿ ಚಾಂಪಿಯನ್ಷಿಪ್ನಲ್ಲಿ ಆಡಿದ್ದರು. 2003ರಿಂದಲೂ ಕ್ರಿಕೆಟ್ ಆಡುತ್ತಿದ್ದೇನೆ. ಆಡಿದ ಪ್ರತಿನಿಮಿಷವೂ ಕ್ರಿಕೆಟ್ಅನ್ನು ಮನರಂಜನಾತ್ಮಕವಾಗಿ ಸ್ವೀಕರಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮೂರು ಟೆಸ್ಟ್ ಪಂದ್ಯಗಳಿಂದ 8 ವಿಕೆಟ್, 75 ಏಕದಿನ ಪಂದ್ಯಗಳಿಂದ 106 ಹಾಗೂ 50 ಟಿ20 ಪಂದ್ಯಗಳಿಂದ 55 ವಿಕೆಟ್ ಕಬಳಿಸಿದ್ದಾರೆ.