ರಂಜನಿ ಅವಸ್ಥಾಂತರ! - ಸಂಚಾರಿ ವಿಜಯ್​ಗೆ ನಾಯಕಿ

ranjani raghavan
Published on

ಬೆಂಗಳೂರು: ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಕಮಾಲ್ ಮಾಡುತ್ತಿದ್ದಾರೆ ನಟಿ ರಂಜನಿ ರಾಘವನ್. ಈಗಾಗಲೇ ಅವರ ‘ಕನ್ನಡತಿ’ ಧಾರಾವಾಹಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಅದರ ನಡುವೆಯೇ ಸಾಲು ಸಾಲು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಇದೀಗ ದೀಪಾವಳಿ ಪ್ರಯುಕ್ತ ಅವರ ಹೊಸ ಸಿನಿಮಾವೊಂದು ಘೋಷಣೆ ಆಗಿದ್ದು, ಅದಕ್ಕೆ ‘ಅವಸ್ಥಾಂತರ’ ಎಂದು ಹೆಸರಿಡಲಾಗಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದು, ಅವರಿಗೆ ರಂಜನಿ ಜೋಡಿಯಾಗುತ್ತಿದ್ದಾರೆ. ಈಗಾಗಲೇ ಮಲಯಾಳಂ ಸಿನಿಮಾ ಸೇರಿ ಹಲವು ಕಿರುಚಿತ್ರ ಮತ್ತು ಜಾಹೀರಾತು ಮಾಡಿದ ಅನುಭವದ ಮೇಲೆ ದೀಪಕ್ ಕುಮಾರ್ ಚೊಚ್ಚಲ ಸಿನಿಮಾ ನಿರ್ದೇಶನಕ್ಕೆ ಧುಮುಕಿದ್ದಾರೆ. ಹಾಗಾದರೆ, ಏನಿದು ‘ಅವಸ್ಥಾಂತರ’ ಆ ಕೌತುಕವನ್ನು ಚಿತ್ರದ ನಾಯಕಿ ರಂಜನಿ ಬಿಡಿಸಿ ಹೇಳಿದ್ದಾರೆ.

‘ಪ್ರಸ್ತುತ ಬಿಜಿ ಲೈಫ್​ನಲ್ಲಿ ಸಂಬಂಧಗಳ ಸುತ್ತ ನಡೆಯುವ ಕಥೆಯೇ ಈ ‘ಅವಸ್ಥಾಂತರ’. ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ಗೊಂದಲದಲ್ಲಿರುವ ವ್ಯಕ್ತಿಯ ಜೀವನದಲ್ಲಿ ಒಬ್ಬ ಸಂಪ್ರದಾಯಬದ್ಧ ಕುಟುಂಬದ, ಮಡಿವಂತಿಕೆಯುಳ್ಳ ಹುಡುಗಿಯ ಆಗಮನವಾದರೆ ಏನೆಲ್ಲ ಅವಾಂತರಗಳು ಘಟಿಸಬಹುದು ಎಂಬುದೇ ಈ ಚಿತ್ರದ ಒಂದೆಳೆ. ಇಲ್ಲಿ ನಾನು ಪ್ರೀತಿ ಹೆಸರಿನ ಪಾತ್ರ ಮಾಡುತ್ತಿದ್ದೇನೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ರಂಜನಿ.

ಸದ್ಯ ಚಿತ್ರೀಕರಣ ಪೂರ್ವ ಕೆಲಸದಲ್ಲಿ ತೊಡಗಿಸಿಕೊಂಡಿರುವ ತಂಡ, ಜನವರಿಯಲ್ಲಿ ಚಿತ್ರೀಕರಣಕ್ಕೆ ತೆರಳಲು ಪ್ಲ್ಯಾನ್ ಮಾಡಿಕೊಂಡಿದೆ. ಇತ್ತ ದಿಗಂತ್ ಅವರ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಶೂಟಿಂಗ್ ಇನ್ನೆರಡು ದಿನಗಳಲ್ಲಿ ಶುರುವಾಗಲಿದ್ದು, ಸಾಗರ ಬಳಿಕ ನಿಟ್ಟೂರಿನತ್ತ ರಂಜನಿ ಸಹ ಪ್ರಯಾಣ ಬೆಳೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net