ಸಂಪತ್ ರಾಜ್ ಬಚ್ಚಿಟ್ಟುಕೊಂಡದ್ದೆಲ್ಲಿ- ಡಿಕೆಶಿ ರಕ್ಷಣೆ ಕೊಟ್ರಾ? : ಸಿ.ಟಿ.ರವಿ ಪ್ರಶ್ನೆ

CT Ravi
Published on

ಚಿಕ್ಕಮಗಳೂರು: ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕಾಂಗ್ರೆಸ್ ಸಮರ್ಥನೆ ಮಾಡಿಕೊಳ್ಳುತ್ತಿದ್ದು, ಇದು ಆ ಪಕ್ಷದ ಅಧೋಗತಿಗೆ ಸಾಕ್ಷಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತೀಕ್ಷ್ಣವಾಗಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಸಂದರ್ಭ, ಸಂಪತ್‍ರಾಜ್ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ತಪ್ಪು ಮಾಡಿದವರು ಡಿ.ಕೆ.ಶಿವಕುಮಾರ್ ಅಥವಾ ಮಾಜಿ ಸಿಎಂ ಸಿದ್ದರಾಮಯ್ಯ ಕಡೆಯವರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇವರಲ್ಲಿ ಯಾರು ತಪ್ಪು ಮಾಡಿದ್ದರೂ ಸಹಿಸಿಕೊಳ್ಳಬೇಕು ಎಂದು ಕಾನೂನಿನಲ್ಲಿ ತಿದ್ದುಪಡಿಯಾಗಿದೆಯೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ತಲೆಮರೆಸಿಕೊಂಡಿದ್ದೆಲ್ಲಿ?

ಇಷ್ಟು ದಿನ ಇವರ ಪಕ್ಷದ ಮಾಜಿ ಮೇಯರ್ ಸಂಪತ್‍ರಾಜ್ ಅವರಿಗೆ ಡಿ.ಕೆ.ಶಿವಕುಮಾರ್ ರಕ್ಷಣೆ ಕೊಟ್ಟಿದ್ದರೆ? ಎಲ್ಲಿ ತಲೆಮರೆಸಿಕೊಂಡಿದ್ದರು? ಅವರು ತಪ್ಪು ಮಾಡದೇ ಇದ್ದಿದ್ದರೆ ತಲೆಮರೆಸಿಕೊಳ್ಳಬೇಕಿತ್ತೇಕೆ? ಆ ದಿನ ಅವರು ನಡೆಸಿದ ಸಂಭಾಷಣೆಗಳು ಸೇರಿದಂತೆ ಎಲ್ಲವನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಸರ್ಕಾರ, ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿದ್ದು, ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದರು.

ಸಂದರ್ಭದ ದುರ್ಲಾಭ : ಸಾಂದರ್ಭಿಕ ಸಾಕ್ಷ್ಯಗಳು ಸಂಪತ್‍ರಾಜ್, ಅವರ ಅಕ್ಕನ ಮಗ ಹಾಗೂ ಅವರ ಪಿಎ ಕಡೆಗೆ ಬೆಟ್ಟು ಮಾಡಿ ತೋರಿಸುತ್ತಿದೆ. ಸಂದರ್ಭದ ದುರ್ಲಾಭ ಪಡೆದು ಅವರ ಮನೆಗೆ ಬೆಂಕಿ ಹಚ್ಚುವ ಕೆಲಸ ಮಾಡಲಾಗಿದೆ. ಅವರ ಪಕ್ಷದ ಶಾಸಕರಿಗೆ ಅಧ್ಯಕ್ಷರು ರಕ್ಷಣೆ ನೀಡುವುದು ಎಂದರೆ ಇದೇ ಏನು ಎಂದು ಪ್ರಶ್ನಿಸಿದರು.

ಅಕಸ್ಮಾತ್ ಬಿಜೆಪಿಯವರೇನಾದರೂ ಶಾಸಕನ ಮನೆಗೆ ಬೆಂಕಿ ಹಾಕಿದ್ದರೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಇದೊಂದು ಅಂತಾರಾಷ್ಟ್ರೀಯ ಸುದ್ದಿಯಾಗುವಂತೆ ನೋಡಿಕೊಳ್ಳುತ್ತಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹುಶಃ ಮುಖ್ಯಮಂತ್ರಿ ಯಡಿಯೂರಪ್ಪ ಮನೆ ಮುಂದೆಯೇ ಧರಣಿ ಕೂರುತ್ತಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆ ಮೇಲೆ ಆಕಾಶ ಕಳಚಿ ಬಿದ್ದಂತೆ ವರ್ತಿಸುತ್ತಿದ್ದರು. ಈಗೇಕೆ ಮೌನವಾಗಿದ್ದಾರೆ. ಅವರ ಪಕ್ಷದವರೇ ಬೆಂಕಿ ಹಾಕಿದರೆ ಅದು ಸಹಿಸಿಕೊಳ್ಳುವ ಸಂಗತಿಯೇ? ಅಪರಾಧಿಗೆ ರಕ್ಷಣೆ ಕೊಡುವ ಮನಸ್ಥಿತಿ ಯಾರಿಗೂ ಒಳ್ಳೆಯದಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net