ಬಾಬುಗೆ ಕೋರ್ಟ್​ನಲ್ಲಿ ಜಯ; 'ಸ್ವಾತಿಮುತ್ತಿನ ಮಳೆ ಹನಿಯೇ' ಶೀರ್ಷಿಕೆಯನ್ನು ರಮ್ಯಾ ಬಳಸುವಂತಿಲ್ಲ!

Swathi Muttina Male Haniye - Rajendra Singh Babu
Published on

ಬೆಂಗಳೂರು: ರಮ್ಯಾ ನಿರ್ಮಾಣದ 'ಸ್ವಾತಿಮುತ್ತಿನ ಮಳೆ ಹನಿಯೇ' ಚಿತ್ರದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್​ ಹಂತದಲ್ಲಿದೆ. ಹೀಗಿರುವಾಗದಲೇ, ಆ ಶೀರ್ಷಿಕೆಯನ್ನು ಬಳಸಬಾರದು ಮತ್ತು ಆ ಶೀರ್ಷಿಕೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೀಡುವಂತಿಲ್ಲ ಎಂದು ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ನೊಟೀಸ್ ನೀಡಿದ್ದರು. ಈ ಕೇಸ್​ನಲ್ಲಿ ಅವರಿಗೆ ಜಯ ಸಿಕ್ಕಿದ್ದು, ಆ ಶೀರ್ಷಿಕೆಯನ್ನು ಬಳಸುವಂತಿಲ್ಲ ಎಂದು ಬಾಬು ಹೇಳಿದ್ದಾರೆ. ಇದರಿಂದಾಗಿ ರಮ್ಯಾ ನಿರ್ಮಾಣದ ಮೊದಲ ಚಿತ್ರಕ್ಕೇ ಸಂಕಷ್ಟ ಎದುರಾಗಿದೆ.

ಈ ಕುರಿತು ಗುರುವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿರುವ ಅವರು, ''ಸ್ವಾತಿ ಮುತ್ತಿನ ಮಳೆ ಹನಿಯೇ ಶೀರ್ಷಿಕೆ ನನಗೆ ಸೇರಬೇಕಾಗಿದ್ದು. ಕೆಲವು ವರ್ಷಗಳ ಹಿಂದೆ ಅದೇ ಹೆಸರಿನಲ್ಲಿ ಅಂಬರೀಷ್​ ಅಭಿನಯದ ಚಿತ್ರ ಶುರು ಮಾಡಿದ್ದೆ. ಚಿತ್ರವು ಓಬೇರಾಯ್ ಹೋಟೆಲ್ ನಲ್ಲಿ ಸಿನಿಮಾ ಸೆಟ್ಟೇರಿತ್ತು. ಡಾ. ರಾಜಕುಮಾರ್ ಮುಖ್ಯ ಅತಿಥಿಯಾಗಿ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್​ ಮಾಡಿದ್ದರು. ಆದರೆ, ಅಂಬಿ ನಿಧನದಿಂದ, ಆ ಚಿತ್ರ ನಿಂತಿದೆ. ಆದರೂ ಸಿನಿಮಾ ಅರ್ಧ ಶೂಟ್​ ಆಗಿದೆ. ಒಂದು ಮಾತೂ ಹೇಳದೇ, ನಮ್ಮ ಗಮನಕ್ಕೆ ತಾರದೇ ಸಿನಿಮಾ ಮಾಡಿದ್ದಾರೆ. ಈ ಸಂಬಂಧ ವಾಣಿಜ್ಯ ಮಂಡಳಿಗೆ ನೋಟೀಸ್ ನೀಡಿದ್ದೆವು' ಎಂದರು ಬಾಬು.

'ಸ್ವಾತಿ ಮುತ್ತಿನ ಮಳೆ ಹನಿಯೇ' ಶೀರ್ಷಿಕೆ ತಮಗೆ ಸೇರಿದ್ದು ಎನ್ನುವ ಬಾಬು, 'ಅದು ನನ್ನ 'ಬಣ್ಣದ ಗೆಜ್ಜೆ' ಚಿತ್ರದ್ದು. ಅದನ್ನು ನನ್ನ ಬಿಟ್ಟರೆ ಯಾರೂ ಬಳಸುವಂತಿಲ್ಲ. ರಮ್ಯಾ ಅವರು ಟೈಟಲ್ ರಿಜಿಸ್ಟರ್ ಮಾಡದೇ ಸಿನಿಮಾ ಮಾಡಿದ್ದಾರೆ. ನಾನು ಕೂಡ ಈ ಟೈಟಲ್ ರಿಜಿಸ್ಟರ್ ಮಾಡಿಸಿಲ್ಲ. ಆ ಶೀರ್ಷಿಕೆಯನ್ನು ರಿಜಿಸ್ಟರ್​ ಮಾಡಿಸುವ ಅವಶ್ಯಕತೆಯೂ ಇಲ್ಲ. ಏಕೆಂದರೆ, ಅದು ನನ್ನ ಸಿನಿಮಾದ ಸಾಹಿತ್ಯದ ಸಾಲಾಗಿದೆ. ಆ ಟೈಟಲ್​ ನನಗೆ ಸೇರಬೇಕು. ಈ ಸಂಬಂಧ ಕೋರ್ಟ್​ಗೆ ಹೋಗಿದ್ದೆ. ಅಲ್ಲಿ ನನಗೆ ಜಯ ಸಿಕ್ಕಿದೆ. ನ್ಯಾಯಾಲಯದಿಂದ ಆರ್ಡರ್​ ಆಗಿದೆ. ಹಾಗಾಗಿ, ಯಾರೂ ಆ ಹೆಸರನ್ನು ಬಳಸುವಂತಿಲ್ಲ' ಎಂದರು.

ಒಂದು ವೇಳೆ ಹಾಗೆ ಮಾಡಿದರೆ ಕಾಪಿರೈಟ್​ ಉಲ್ಲಂಘನೆ ಮಾಡಿದ ಹಾಗಾಗುತ್ತದೆ ಎನ್ನುವ ಅವರು, 'ಹಾಗೇನಾದರೂ ಮಾಡಿದರೆ, ವಾಣಿಜ್ಯ ಮಂಡಳಿಗೆ ಟೈಟಲ್ ರಿಜಿಸ್ಟ್ರೇಷನ್ ಮಾಡುವ ಪವರ್​ ಹೊರಟು ಹೋಗುತ್ತದೆ. ವಾಣಿಜ್ಯ ಮಂಡಳಿಯವರು ಕಾಪಿರೈಟ್ ಆ್ಯಕ್ಟ್ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೋ ಗೊತ್ತಿಲ್ಲ. ಆದರೆ, ಕಾಪಿರೈಟ್ ನಿಯಮಗಳನ್ನು ಮುರಿಯುವ ಹಾಗಿಲ್ಲ. ಹಾಗೇನಾದರೂ ಮಾಡಿದರೆ, ಉಲ್ಲಂಘನೆ ಮಾಡಿದ ಹಾಗಾಗುತ್ತದೆ. ಈ ಸಂಬಂಧ ಬರೀ ವಾಣಿಜ್ಯ ಮಂಡಳಿಗಷ್ಟೇ ಅಲ್ಲ, ಸೆನ್ಸಾರ್ ಬೋರ್ಡ್​ನವರಿಗೂ ನೋಟೀಸ್​ ಕೊಟ್ಟಿದ್ದೇವೆ' ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net