'ಪಠಾಣ್' ಬಾಯ್ಕಾಟ್ ವಿವಾದಕ್ಕೆ ನಟಿ ರಮ್ಯಾ ಆಕ್ರೋಶ; ದೀಪಿಕಾ ಪರ ಮೋಹಕ ತಾರೆ ಬ್ಯಾಟಿಂಗ್​

Ramya - Deepika Padukone
Published on

ಬೆಂಗಳೂರು: ಶಾರುಖ್​ ಖಾನ್​ ಅಭಿನಯದ 'ಪಠಾಣ್​' ಚಿತ್ರದಲ್ಲಿನ 'ಬೇಷರಮ್​ ದಿಲ್​' ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ತೊಟ್ಟಿದ್ದಿಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ 'ಬಾಯ್ಕಾಟ್ ಪಠಾಣ್' ಎಂಬ ಅಭಿಯಾನ ಶುರುವಾಗಿದೆ. ಹೀಗೆ ದೀಪಿಕಾ ಬಗ್ಗೆ ಟ್ರೋಲ್​ ಮಾಡುತ್ತಿರುವವರ ವಿರುದ್ಧ ಸ್ಯಾಂಡಲ್​ವುಡ್​ ನಟಿ ರಮ್ಯಾ ಕಿಡಿ ಕಾರಿದ್ದಾರೆ.

ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, 'ಸಮಂತಾ ಡಿವೋರ್ಸ್ ವಿಚಾರಕ್ಕಾಗಿ ಟ್ರೋಲ್ ಆದರು. ಸಾಯಿಪಲ್ಲವಿ ತಮ್ಮ ಅಭಿಪ್ರಾಯಕ್ಕೆ, ರಶ್ಮಿಕಾ ಸಂಬಂಧದಿಂದ ಹೊರಬಂದಿದ್ದಕ್ಕೆ, ದೀಪಿಕಾ ತಮ್ಮ ಬಟ್ಟೆಗೆ ... ಹೀಗೆ ಪ್ರತಿಯೊಂದು ವಿಷಯಕ್ಕೂ ಮಹಿಳೆಯರನ್ನು ಧೂಷಿಸಲಾಗುತ್ತದೆ. ಸ್ವಾತಂತ್ರ್ಯ ನಮ್ಮ ಹಕ್ಕು. ಮಹಿಳೆಯರು ದುರ್ಗೆಯ ಸಾಕಾರ ರೂಪ. ಸ್ತ್ರೀದ್ವೇಷದ ವಿರುದ್ಧ ನಾವು ಹೋರಾಡಬೇಕಿದೆ' ಎಂದು ಹೇಳಿಕೊಂಡಿದ್ದಾರೆ.

ಇನ್ನು, ಈ ವಿಷಯವಾಗಿ ಕೋಲ್ಕತ್ತ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (KIFF) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಶಾರುಖ್ ಖಾನ್, 'ಸೋಷಿಯಲ್​ ಮೀಡಿಯಾದಲ್ಲಿ ನಾವು ಮನುಷ್ಯನ ಸಂಕುಚಿತ ಮನೋಭಾವವನ್ನು ನೋಡಬಹುದು. ಈ ನೆಗೆಟಿವಿಟಿಯು ಸಾಮಾಜಿಕ ಮಾಧ್ಯಮ ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ಅದರ ವಾಣಿಜ್ಯ ಮೌಲ್ಯವನ್ನು ಹೆಚ್ಚಿಸುತ್ತದೆ. ಇದು ಸಮೂಹವನ್ನು ವಿಭಜಿಸುವುದರ ಜತೆಗೆ ಇನ್ನಷ್ಟು ವಿನಾಶಕಾರಿಯಾಗಿ ಮಾಡುತ್ತದೆ' ಎಂದಿದ್ದಾರೆ.

ಬಹುಭಾಷಾ ನಟ ಪ್ರಕಾಶ್​ ರೈ ಸಹ ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, 'ಕೇಸರಿ ಬಣ್ಣದವರು ರೇಪಿಸ್ಟ್​ಗಳಿಗೆ ಮಾಲೆ ಹಾಕುತ್ತಾರೆ. ದ್ವೇಷದ ಮಾತುಗಳನ್ನಾಡುತ್ತಾರೆ. ಕೇಸರಿ ಬಣ್ಣ ತೊಟ್ಟವರು ಮೈನರ್​ಗಳನ್ನು ರೇಪ್​ ಮಾಡುತ್ತಾರೆ. ಆದರೆ, ಚಿತ್ರದಲ್ಲಿ ಕೇಸರಿ ಬಟ್ಟೆ ತೊಟ್ಟರೆ ಸಹಿಸುವುದಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net