

ಕಳೆದ ಕೆಲವು ತಿಂಗಳುಗಳಿಂದ ಒಂದರಹಿಂದೊಂದು ಸಿನಿಮಾ ಮಾಡುತ್ತಿದ್ದಾರೆ ಹಿರಿಯ ನಿರ್ದೇಶಕ ರಾಮ್ಗೋಪಾಲ್ ವರ್ಮಾ. ಕಥೆ ಬರೆಯುವುದು, ಚಿತ್ರ ನಿರ್ದೇಶನ ಮತ್ತು ನಿರ್ಮಾಣ ಮಾಡುವುದು ... ಹೀಗೆ ಒಂದಿಲ್ಲೊಂದು ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಅವರು, ಇದೀಗ ಎಲ್ಲೋ ಮಿಸ್ ಆಗಿದ್ದಾರೆ ಎಂಬಂತಹ ಸುದ್ದಿಗಳು ಬರುತ್ತಿವೆ.
ಇದೇನಿದು ಹೊಸ ಟ್ವಿಸ್ಟು ಎಂಬ ಪ್ರಶ್ನೆ ಬರುವುದು ಸಹಜ. ಇತ್ತೀಚೆಗಷ್ಟೇ, 'ಪವರ್ ಸ್ಟಾರ್' ಚಿತ್ರದ ಸಂಬಂಧ ಅವರಿಗೂ ಮತ್ತು ಪವನ್ ಕಲ್ಯಾಣ್ ಅವರ ಅಭಿಮಾನಿಗಳಿಗೂ ದೊಡ್ಡ ಗಲಾಟೆಯೇ ಆಗಿತ್ತು. ಪವನ್ ಕಲ್ಯಾನ್ ಅಭಿಮಾನಿಗಳು ಆರ್ಜಿವಿ ಆಫೀಸಿಗೆ ನುಗ್ಗಿ ಗಲಾಟೆ ಮಾಡಿದ್ದರು. ಇದಕ್ಕೂ, ಅದಕ್ಕೂ ಏನಾದರೂ ಸಂಬಂಧವಿದೆಯಾ ಎಂಬ ಪ್ರಶ್ನೆ ಬರುವುದು ಸಹಜ.
ಹಾಗೇನಿಲ್ಲ ಬಿಡಿ, ರಾಮ್ಗೋಪಾಲ್ ವರ್ಮಾ, ಇದೀಗ ಹೊಸದೊಂದು ಚಿತ್ರ ಮಾಡುತ್ತಿದ್ದಾರಂತೆ. ಆ ಚಿತ್ರದ ಹೆಸರೇನು ಗೊತ್ತಾ? 'ಆರ್ಜಿವಿ ಮಿಸ್ಸಿಂಗ್'. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ಅದರಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು, ಈ ಹಿಂದಿನ ಅವರ ಚಿತ್ರಗಳಂತೆ ಇರುವುದಿಲ್ಲವಂತೆ. ಅಂದರೆ, ಈ ಹಿಂದಿನ ಅವರ ಕೆಲವು ಚಿತ್ರಗಳು ಕಡಿಮೆ ಅವಧಿಯದ್ದಾಗಿದ್ದವು. ಉದಾಹರಣೆಗೆ, 'ಪವರ್ ಸ್ಟಾರ್' ಚಿತ್ರವು ಕೇವಲ 37 ನಿಮಿಷಗಳ ಅವಧಿಯ ಚಿತ್ರವಾಗಿತ್ತು. 'ಆರ್ಜಿವಿ ಮಿಸ್ಸಿಂಗ್' ಆ ರೀತಿ ಇರುವುದಿಲ್ಲವಂತೆ. ಅದೂ ಒಂದು ಗಂಟೆಗೂ ಹೆಚ್ಚಿನ ಅವಧಿಯದ್ದಾಗಿರುತ್ತದೆ ಎಂದು ಹೇಳಲಾಗುತ್ತಿದೆ.
ಈ ಚಿತ್ರ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಯಾವಾಗ ಬಿಡುಗಡೆಯಾಗುತ್ತದೆ ಎಂಬ ವಿಷಯದಲ್ಲಿ ಇನ್ನೂ ಸ್ಪಷ್ಟತೆಯಿಲ್ಲ. ಮುಂದಿನ ದಿನಗಳಲ್ಲಿ ವರ್ಮಾ ಅವರೇ, 'ಆರ್ಜಿವಿ ಮಿಸ್ಸಿಂಗ್' ಕುರಿತು ಅಧಿಕೃತ ಘೋಷಣೆ ನೀಡಲಿದ್ದಾರೆ ಎಂಬ ಮಾಹಿತಿ ಇದೆ.
ಇದಲ್ಲದೆ, ಕೆಲವು ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾದ ತೆಲುಗು ನಟ ಉದಯಕಿರಣ್ ಅವರ ಜೀವನವನ್ನಾಧರಿಸಿ 'ಹೃದಯ ಕಿರಣ್' ಎಂಬ ಚಿತ್ರವನ್ನು ವರ್ಮಾ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜತೆಗೆ, ನಟ-ನಿರ್ದೇಶಕ ನಂದಮೂರಿ ಬಾಲಕೃಷ್ಣ ಅವರ ಜೀವನದಲ್ಲಾದ ಘಟನೆಯನ್ನಾಧರಿಸಿ, 'ಆ ರಾತ್ರಿ ಏಮ್ ಜರಗಿಂದಿ' (ಆ ರಾತ್ರಿ ಏನಾಯಿತು) ಎಂಬ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.