

ಕನ್ನಡದಲ್ಲಿ ಅತೀ ಹೆಚ್ಚು ಸಿನಿಮಾಗಳಲ್ಲಿ ತೊಡಗಿಸಿಕೊಂಡ ನಟ ಯಾರಾದರೂ ಇದ್ದಾರೆಂದರೆ ಅದು ಧನಂಜಯ್. ಈಗಾಗಲೇ ಧನಂಜಯ್ ಅಭಿನಯದ 'ಸಲಗ' ಮತ್ತು 'ಯುವರತ್ನ' ಚಿತ್ರಗಳು ಬಿಡಗಡೆಗೆ ಸಿದ್ಧತೆ ನಡೆಸಿವೆ. ಇದಲ್ಲದೆ ಧನಂಜಜ್ ಅಭಿನಯದ 'ಡಾಲಿ', 'ಬಡವ ರಾಸ್ಕಲ್' ಚಿತ್ರಗಳು ಚಿತ್ರೀಕರಣ ಹಂತದಲ್ಲಿದೆ. ಬೆಂಗಳೂರಿನ ಮಾಜಿ ಡಾನ ಎಂ.ಪಿ. ಜಯರಾಜ್ ಕುರಿತು ಒಂದು ಚಿತ್ರದಲ್ಲಿ ಧನಂಜಯ್ ನಟಿಸಬೇಕಿದೆ. ಇದಲ್ಲದೆ ಶಿವರಾಜಕುಮಾರ್ ಅಭಿನಯದ ಹೊಸ ಚಿತ್ರದಲ್ಲೂ ಅವರು ನಟಿಸಿದ್ದಾರೆ.
ಹೀಗೆ ಇಷ್ಟೆಲ್ಲಾ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಧನಂಜಯ್, ಇದೀಗ ಸದ್ದಿಲ್ಲದೆ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರ ಶುರುವಾಗುವುದು ಮುಂದಿನ ವರ್ಷವೇ ಆದರೂ, ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಇಂದು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.
ಅಂದಹಾಗೆ, ಧನಂಜಯ್ ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು 'ರತ್ನನ್ ಪ್ರಪಂಚ'. ಹೆಸರು ಕೇಳಿದರೆ, ಜಿ.ಪಿ. ರಾಜರತ್ನಂ ಅವರ 'ರತ್ನನ್ ಪರ್ಪಂಚ' ನೆನಪಿಗೆ ಬರಬಹುದು. ಈ ಚಿತ್ರಕ್ಕೂ ಜಿಪಿ ರಾಜತ್ನಂ ಅವರ ಕವನ ಸಂಕಲನಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ, ರತ್ನಾಕರ ಎಂಬುವವನ ಕಥೆ ಇದಾಗಿರುವುದರಿಂದ ಆ ಹೆಸರನ್ನು ಬಳಸಿಕೊಳ್ಳಲಾಗಿದೆ ಅಷ್ಟೇ.
'ರತ್ನನ್ ಪ್ರಪಂಚ' ಚಿತ್ರವನ್ನು ರೋಹಿತ್ ಪದಕಿ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ಆಟಗಾರ' ಸೇರಿದಂತೆ ಕೆಲವು ಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದ ರೋಹಿತ್, ಆ ನಂತರ 'ದಯವಿಟ್ಟು ಗಮನಿಸಿ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. ಈಗ ರೋಹಿತ್, ತಮ್ಮ ಎರಡನೆಯ ಚಿತ್ರವಾಗಿ 'ರತ್ನನ್ ಪ್ರಪಂಚ'ವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.
ಇನ್ನು ಈ ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್, ಕೆಆರ್ಜಿ ಸ್ಟುಡಿಯೋಸ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. 'ಕೆಜಿಎಫ್ 2' ಮತ್ತು 'ಯುವರತ್ನ' ಚಿತ್ರಗಳ ನಿರ್ಮಾಪಕರಾದ ವಿಜಯ್ ಕಿರಗಂದೂರ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಶ್ರೀಶ ಕುಡುವಳ್ಳಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
'ರತ್ನನ್ ಪ್ರಪಂಚ' ಇದೀಗ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಕರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆಯೇ ಮುಂದಿನ ವರ್ಷ ಶುರುವಾಗುವ ಸಾಧ್ಯತೆ ಇದೆ.