ನಮ್ದೇ ದಾರಿ, ನಮ್ದೇ ಸವಾರಿ ... 'ಯುವರತ್ನ' ಚಿತ್ರದ ಹೊಸ ಪೋಸ್ಟರ್​ ಬಂತು

Yuvaratna - Final
Published on

ಪುನೀತ್​ ರಾಜಕುಮಾರ್​ ಅಭಿನಯದ 'ಯುವರತ್ನ' ಚಿತ್ರದ ಏನಾದರೂ ಅಪ್​ಡೇಟ್​ಗಳನ್ನು ಕೊಡಿ ಎಂದು ಪುನೀತ್​ ಅವರ ಅಭಿಮಾನಿಗಳು ಬಹಳ ದಿನಗಳಿಂದ ಕೇಳುತ್ತಲೇ ಬಂದಿದ್ದಾರೆ. ಅದಕ್ಕೆ ಸರಿಯಾಗಿ ಚಿತ್ರದ ಇನ್ನೊಂದು ಪೋಸ್ಟರ್​​ನ್ನು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ.

ಪುನೀತ್​ ಸಖತ್​ ಸ್ಟೆಪ್​ ಹಾಕುತ್ತಿರುವ ಈ ಪೋಸ್ಟರ್​ನಲ್ಲಿರುವ ಸಾಲುಗಳು ಸಖತ್​ ಕ್ಯಾಚಿಯಾಗಿದ್ದು, ಪುನೀತ್​ ಅವರ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ. 'ನಾವ್​ ಯಾವತ್ತೂ ಬೇರೆಯವರ ರೂಟಲ್ಲಿ ಟ್ರಾವಲ್​ ಆಗಲ್ಲ. ನಮ್ದೇ ದಾರಿ - ನಮ್ದೇ ಸವಾರಿ ... ಪಕ್ಕದಲ್ಲಿ ಫೆರಾರಿ ಹೋದ್ರೂ ತಲೆ ಕೆಡಿಸಿಕೊಳ್ಳಲ್ಲ' ಎಂಬ ಸಾಲುಗಳಿರುವ ಈ ಪೋಸ್ಟರ್​ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್​ ಆಗುತ್ತಿದೆ.

'ಯುವರತ್ನ' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನು ಎರಡು ಹಾಡುಗಳು ಮಾತ್ರ ಬಾಕಿ ಇವೆ. ಈ ಹಾಡುಗಳನ್ನು ಮೊದಲು ಫಾರಿನ್​ನಲ್ಲಿ ಚಿತ್ರೀಕರಿಸಬೇಕು ಎಂದು ಚಿತ್ರತಂಡ ಪ್ಲಾನ್​ ಮಾಡಿಕೊಂಡಿತ್ತು. ಆದರೆ, ಅಷ್ಟರಲ್ಲಿ ಕರೊನಾ ಹಾವಳಿ ಜಾಸ್ತಿಯಾದ ಕಾರಣ, ಚಿತ್ರೀಕರಣವನ್ನು ಭಾರತದಲ್ಲೇ ಮಾಡುವುದಕ್ಕೆ ಚಿತ್ರತಂಡ ಯೋಚಿಸಿದೆ. ಒಂದು ಹಾಡನ್ನು ಗೋವಾದಲ್ಲಿ ಚಿತ್ರೀಕರಿಸಲಾಗುವುದು ಎಂದು ಈ ಹಿಂದೆ ಸಂತೋಷ್​ ಆನಂದರಾಮ್​ ಹೇಳಿಕೊಂಡಿದ್ದರು. ಇನ್ನೊಂದು ಹಾಡಿನ ಚಿತ್ರೀಕರಣದ ಲೊಕೇಶನ್​ ಇನ್ನಷ್ಟೇ ಫೈನಲ್​ ಆಗಬೇಕಿದೆ.

'ಯುವರತ್ನ' ಚಿತ್ರಕ್ಕೆ ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಎಸ್​.ಎಸ್​. ತಮನ್​ ಸಂಗೀತ ಸಂಯೋಜಿಸುತ್ತಿದ್ದು, ಕೆಲಸಗಳು ಪ್ರಗತಿಯಲ್ಲಿದೆ. ಇಷ್ಟರಲ್ಲಾಗಲೇ ಹಾಡುಗಳು ಬಿಡುಗಡೆಯಾಗಬೇಕಿದ್ದು, ಕರೊನಾ ಹಾವಳಿಯಿಂದ ಎಲ್ಲವೂ ತಡವಾಗುತ್ತಿದೆ ಎಂದು ತಮನ್​ ಅವರೇ ಇತ್ತೀಚೆಗೊಮ್ಮೆ ಟ್ವೀಟ್​ ಮಾಡಿಕೊಂಡಿದ್ದರು.

ಹೊಂಬಾಳೆ ಫಿಲಂಸ್​ನಡಿ ವಿಜಯಕುಮಾರ್​ ಕಿರಗಂದೂರು ನಿರ್ಮಿಸುತ್ತಿರುವ ಈ ಚಿತ್ರನ್ನು ಸಂತೋಷ್​ ಆನಂದರಾಂ ನಿರ್ದೇಶಿಸುತ್ತಿದ್ದಾರೆ. ಪುನೀತ್​ ಜತೆಗೆ ಸಾಯೇಷಾ, ದಿಗಂತ್​, ಧನಂಜಯ್​ ಸೇರಿದಂತೆ ಹಲವರು ಅಭಿನಯಿಸಿದ್ದು, ಈ ವರ್ಷದ ಕೊನೆ ಅಥವಾ ಮುಂದಿನ ವರ್ಷ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net