

ಬೆಂಗಳೂರು: ಉಪೇಂದ್ರ ಅಭಿನಯಿಸುತ್ತಿರುವ 'ಕಬ್ಜ' ಚಿತ್ರದ ಚಿತ್ರೀಕರಣ ಇದೇ ತಿಂಗಳ ಕೊನೆಯಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ. ಈ ಮಧ್ಯೆ, ನಾಳೆ ಶುಕ್ರವಾರ (ಸೆಪ್ಟೆಂಬರ್ 18) ಉಪೇಂದ್ರ ಅವರ ಹುಟ್ಟುಹಬ್ಬವಿದ್ದು, 'ಕಬ್ಜ' ಚಿತ್ರತಂಡವು ಥೀಮ್ ಪೋಸ್ಟರ್ ಬಿಡುಗಡೆ ಮಾಡಿ, ಶುಭಕೋರಿದೆ.
ಅಂದಹಾಗೆ, ಈ ಥೀಮ್ ಪೋಸ್ಟರ್ ಬಿಡುಗಡೆ ಮಾಡಿದ್ದು ಯಾರು ಗೊತ್ತಾ? ಖ್ಯಾತ ನಿರ್ದೇಶಕ ರಾಮ್ಗೋಪಾಲ್ ವರ್ಮಾ. ಅಂಡರ್ವರ್ಲ್ಡ್ ಚಿತ್ರಗಳನ್ಜು ನಿರ್ದೇಶಿಸುವುದರಲ್ಲಿ ದೊಡ್ಡ ಹೆಸರು ಮಾಡಿರುವ ರಾಮ್ಗೋಪಾಲ್ ವರ್ಮಾ, ಈ ಅಂಡರ್ವರ್ಲ್ಡ್ ಚಿತ್ರದ ಕೆಲವು ತುಣುಕುಗಳನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಥೀಮ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
'ಕಬ್ಜ' ಚಿತ್ರದ ಚಿತ್ರೀಕರಣ ಈ ವರ್ಷದ ಆರಂಭದಲ್ಲಿ ಶುರುವಾಗಿ, ಶೇ 40ರಷ್ಟು ಮುಕ್ತಾಯವಾಗಿದೆ. ಇದೀಗ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಉಪೇಂದ್ರ ಅವರು ಈ ಚಿತ್ರಕ್ಕಾಗಿ ಪ್ರತಿದಿನ ನಾಲ್ಕು ಘಂಟೆಗೂ ಹೆಚ್ಚು ಕಾಲ ವ್ಯಾಯಾಮ ಮಾಡಿ, ಪಾತ್ರಕ್ಕೆ ಸೂಕ್ತವಾಗಿ ತಮ್ಮ ದೇಹವನ್ನು ರೂಪಿಸಿಕೊಂಡಿದ್ದಾರೆ.
'ಕಬ್ಜ' ಚಿತ್ರಕ್ಕೆ ಆರ್. ಚಂದ್ರು ಕಥೆ ಬರೆದು ನಿರ್ದೇಶಿಸುತ್ತಿದ್ದು, ಈ ಚಿತ್ರವು ಏಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದರೆ, ಎ.ಜೆ.ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ ಬಳಿಕ ಹಾಸ್ಯ ನಟ ಧರ್ಮಣ್ಣ ಸಖತ್ ಬಿಜಿ
ಚಿತ್ರದಲ್ಲಿ ಉಪೇಂದ್ರ ಜತೆಗೆ ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕೇನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್ ರಾವ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಚಿತ್ರದ ನಾಯಕಿ ಯಾರೆಂದು ಇನ್ನಷ್ಟೇ ಘೋಷಣೆಯಾಗಬೇಕಿದೆ.