

ಬೆಂಗಳೂರು: ಹಾಸ್ಯ ನಟ ಧರ್ಮಣ್ಣ ಲಾಕ್ಡೌನ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಸುದೀರ್ಘ ಆರು ತಿಂಗಳ ಬಳಿಕ ಮತ್ತೆ ಮುಖಕ್ಕೆ ಬಣ್ಣ ಹಚ್ಚಿಕೊಳ್ಳುತ್ತಿದ್ದಾರೆ. ಅಂದಹಾಗೆ, ಈ ವರ್ಷದ ಆರಂಭದಲ್ಲಿ ‘ಕಾಣದಂತೆ ಮಾಯವಾದನು’ ಸಿನಿಮಾ ಮೂಲಕ ಎಂಟ್ರಿ ಕೊಟ್ಟರೂ, ಬಳಿಕ ಕರೊನಾ ಹಿನ್ನೆಲೆಯಲ್ಲಿ ಅವರ ನಟನೆಯ ಬೇರಾವ ಸಿನಿಮಾಗಳು ತೆರೆಕಂಡಿರಲಿಲ್ಲ. ಇದೀಗ ಅದೆಲ್ಲವನ್ನು ಬದಿಗಿಟ್ಟು ಹೊಸ ಹೊಸ ಅವಕಾಶಗಳನ್ನು ಗಿಟ್ಟಿಸಿಕೊಂಡು, ಬಿಜಿಯೆಸ್ಟ್ ನಟನಾಗಿದ್ದಾರೆ.
ಶಶಿಧರ್ ಕೆ.ಎಂ ನಿರ್ದೇಶನದ ಜತೆಗೆ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನ್ ಅವರ ಸಹಯೋಗವಿದೆ. ಇನ್ನು ‘ಶುಗರ್ಲೆಸ್’ ಚಿತ್ರದಲ್ಲಿ ನಾಯಕ ಪೃಥ್ವಿಗೆ ಸ್ನೇಹಿತನಾಗಿ ಕಾಣಿಸಿಕೊಂಡಿರುವ ಧರ್ಮಣ್ಣ, ಈಗಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಹಳ್ಳಿಯಿಂದ ಬಂದ ಇಂಜಿನಿಯರ್ ವರಸೆ ಹೇಗಿರುತ್ತದೆ ಎಂಬುದನ್ನು ಅವರಿಲ್ಲಿ ಪಾತ್ರದ ಮೂಲಕ ಪೋಷಿಸಲಿದ್ದಾರೆ. ಬೆಂಗಳೂರಿನ ಸುತ್ತ ಮುತ್ತ ಒಟ್ಟು 45 ದಿನ ‘ಶುಗರ್ಲೆಸ್’ ಚಿತ್ರೀಕರಣ ನಡೆಯಲಿದ್ದು, ಸೋಮವಾರದಿಂದ ಎಲ್ಲ ಪ್ರಮುಖ ಪಾತ್ರಧಾರಿಗಳು ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಿನಿಮಾದ ಜತೆಯಲ್ಲಿಯೇ ಸಖತ್ ಮತ್ತು ಮದಗಜ ಚಿತ್ರದಲ್ಲಿಯೂ ಧರ್ಮಣ್ಣ ನಟಿಸುತ್ತಿದ್ದು, ಸೆ. 19ರಿಂದ ಮದಗಜ ಶೂಟಿಂಗ್ ಆರಂಭವಾಗಲಿದೆ. ಮುಂದಿನ ಶೆಟ್ಯೂಲ್ನಲ್ಲಿ ಆ ಚಿತ್ರದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಇತ್ತ ಸಿಂಪಲ್ ಸುನಿ ‘ಅವತಾರ್ ಪುರುಷ’ ಚಿತ್ರದಲ್ಲಿ ಬಿಜಿಯಿರುವುದರಿಂದ, ಆ ಚಿತ್ರದ ಕೆಲಸ ಮುಗಿದ ಬಳಿಕ ‘ಸಖತ್’ ಶುರುವಾಗಲಿದೆ. ಈ ಸಿನಿಮಾ ಹೊರತು ಪಡಿಸಿ ಇನ್ನೂ ಮೂರ್ನಾಲ್ಕು ಸಿನಿಮಾ ಆಫರ್ಗಳು ಧರ್ಮಣ್ಣ ಬತ್ತಳಿಕೆಯಲ್ಲಿವೆ.
ದರ್ಶನ್ ನಾಯಕತ್ವದ ‘ರಾಬರ್ಟ್’, ‘ಇನ್ಸ್ಪೆಕ್ಟರ್ ವಿಕ್ರಂ’ ಮತ್ತು ಐ ಆ್ಯಮ್ ಪ್ರಗ್ನೆಂಟ್ ಚಿತ್ರದ ಕೆಲಸಗಳನ್ನು ಮುಗಿಸಿಕೊಂಡಿದ್ದು, ಇನ್ನೇನು ಆ ಸಿನಿಮಾಗಳು ಬಿಡುಗಡೆ ಆಗಬೇಕಿವೆ. ಒಟ್ಟಿನಲ್ಲಿ ಆರು ತಿಂಗಳು ಖಾಲಿ ಕುಳಿತರೂ, ಒಮ್ಮೆಗೆ ಮೂರ್ನಾಲ್ಕು ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ ಧರ್ಮಣ್ಣ.
‘ಸಿನಿಮಾದಿಂದ ಸಿನಿಮಾಕ್ಕೆ ಹೊಸ ಹೊಸ ಅವಕಾಶಗಳು ಹುಡುಕಿ ಬರುತ್ತಿವೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳನ್ನು ಪೋಷಿಸುತ್ತಿದ್ದೇನೆ. ನಿಜಕ್ಕೂ ಇದು ನನ್ನ ಸೌಭಾಗ್ಯ’ ಎಂದು ಖುಷಿ ಹಂಚಿಕೊಳ್ಳುತ್ತಾರೆ ಧರ್ಮಣ್ಣ.