

ಗೋಕಾಕ್: ಕಳೆದ ಕೆಲ ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಸಿಡಿ ಹಾಗೂ ಪೆನ್ಡ್ರೈವ್ ವಿಚಾರಗಳು ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಅಶ್ಲೀಲ ವಿಡಿಯೋ ಪ್ರಕರಣಗಳು ರಾಜಕೀಯ ಕೆಸರೆರಚಾಟಕ್ಕೆ ಆಸ್ಪದ ಮಾಡಿಕೊಟ್ಟಿವೆ. ಇನ್ನೂ ಈ ವಿಚಾರವಾಗಿ ಮಾತನಾಡಿರುವ ಮಾಜಿ ಸಚಿವ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಆ ಮಹಾನಾಯಕನನ್ನು ಈಗಲೇ ತಡೆಯಿರಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.
ಗೋಕಾಕ್ನಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ರಮೇಶ್, ಪ್ರಜ್ವಲ್ನಂತೆಯೇ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರ ವಿಡಿಯೋಗಳು ಬರಬಹುದು ಎಚ್ಚರವಾಗಿರಿ. ಆ ಮಹಾನಾಯಕ ಬಹಳ ಪ್ರಭಾವಿ ಹುಷಾರು ಎಂದಿದ್ದಾರೆ.
ನನ್ನ ಖಾಸಗಿ ವಿಡಿಯೋಗಳು ಹೊರಬಂದಾಗಲೇ ಎಚ್ಚರಿಸಿದ್ದೆ ಆ ಮಹಾನಾಯಕ ಬಹಳ ಪ್ರಭಾವಿ, ಹಣ ಇರುವವನು ಎಂದು ಏನು ಬೇಕಾದರೂ ಮಾಡಬಲ್ಲೆ ಎಂಬ ಸೊಕ್ಕು ಇದೆ ಅವನಿಗೆ ಇತಿಶ್ರೀ ಹಾಡಬೇಕು ಎಂದು ಹೇಳಿದ್ದೆ. ನಾನು ಈ ಮೂಲಕ ಸಿಎಂ ಅವರಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಈ ವಿಡಿಯೋ ಪ್ರಕರಣಗಳಿಗೆ ಪಕ್ಷಾತೀತವಾಗಿ ಕೊನೆಹಾಡಿ.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದು ಹೇಳುತ್ತಿದ್ದಾರೆ. ಆದರೆ, ನನ್ನ ಪ್ರಕರಣದಲ್ಲಿ ನೇರ ಕೈವಾಡ ಇದೆ. ಎಲ್ಲ ಸಾಕ್ಷಿ, ದಾಖಲೆಗಳೂ ನನ್ನ ಬಳಿ ಇವೆ. ಪ್ರಜ್ವಲ್ ವಿಚಾರದಲ್ಲಿ ಪರೋಕ್ಷವಾಗಿ ಆರೋಪಿ ಎನ್ನುತ್ತಿದ್ದಾರೆ. ಆದರೆ, ನನ್ನ ವಿಚಾರದಲ್ಲಿ ನೇರ ಆರೋಪಿ. ನನ್ನ ಪ್ರಕರಣ ಸಿಬಿಐಗೆ ಕೊಟ್ಟರೆ ಎಲ್ಲ ಸಾಕ್ಷಿ ಒದಗಿಸುತ್ತೇನೆ. ನನ್ನ ಕೇಸಿನಲ್ಲಿ ಶಿವಕುಮಾರ್ ಮಾತ್ರವಲ್ಲ; ನಮ್ಮವರೂ ಕೆಲವರು ಭಾಗಿಯಾಗಿದ್ದಾರೆ. ಹೀಗಾಗಿ ನನಗೆ ಎಸ್.ಐ.ಟಿ ಮೇಲೆ ಆಗಲೂ ವಿಶ್ವಾಸ ಇರಲಿಲ್ಲ, ಈಗಲೂ ಇಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಕಾನೂನು ಸುವ್ಯವಸ್ಥೆ ಉಳಿಯಬೇಕೆಂದರೆ ಇಂಥ ಪ್ರಕರಣಗಳನ್ನು ಮೊದಲು ಇಲ್ಲವಾಗಿಸಬೇಕು. ಜೂನ್ 04ರ ನಂತರ ನಾನು ಎಲ್ಲದಕ್ಕೂ ಇತಿಶ್ರೀ ಹಾಡುತ್ತೇನೆ. ಪ್ರಜ್ವಲ್ ರೇವಣ್ಣ ಪ್ರಕರಣ ಯಾರೂ ಹೆಮ್ಮೆ ಪಡುವ ವಿಷಯ ಅಲ್ಲ. ಎಲ್ಲರೂ ತಲೆ ತಗ್ಗಿಸುವ ವಿಷಯ. ಬಹಳ ಕೆಟ್ಟ ಪ್ರಮಾಣದಲ್ಲಿ ಅನ್ಯಾಯ ಆಗಿದೆ. ರೇವಣ್ಣ ಅವರು ಕಾನೂನು ರೀತಿ ಹೋರಾಟ ಮಾಡಲಿ ಎಂದು ಮಾಜಿ ಸಚಿವ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.