

ಬೆಳಗಾವಿ: ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಯೋಗ ಇದ್ರೆ ಮುಖ್ಯಮಂತ್ರಿ ಆಗಲಿ ಬಿಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾರ್ಮಿಕವಾಗಿ ಹೇಳಿದರು.
ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಭವಿಷ್ಯ ಮತ್ತು ರಾಜ್ಯದ ಮುಂದಿನ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಂಬ ಅಭಿಯಾನ ನಡೆಸಿರುವುದು ನನಗಂತೂ ಗೊತ್ತಿಲ್ಲ. ಪಾಪ, ಸವದಿ ಹಣೆಬರಹದಲ್ಲಿ ಮುಖ್ಯಮಂತ್ರಿ ಯೋಗ ಇದ್ದರೆ ಯಾರೂ ತಪ್ಪಿಸಲು ಆಗುವುದಿಲ್ಲ. ಅವರಿಗೆ ಸಿಎಂ ಯೋಗ ಇದ್ರೆ ಆಗಲಿ ಬಿಡಿ ಎಂದು ಸುದ್ದಿಗಾರರ ಬಳಿ ನಕ್ಕರು.
ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಶಾಸಕರನ್ನು ನೇಮಿಸಿದ್ದಾರೆ. ಇದರಿಂದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದು, ದೊಡ್ಡ ಪಕ್ಷದಲ್ಲಿ ಇದೆಲ್ಲ ಸಾಮಾನ್ಯ. ಮುಂದೆ ಈ ಸಮಸ್ಯೆಗಳೆಲ್ಲ ಬಗೆಹರಿಯಲಿವೆ. ಹೈಕಮಾಂಡ್ ನಿರ್ದೇಶನದಂತೆ ನಿಗಮ-ಮಂಡಳಿ ಅಧ್ಯಕ್ಷರನ್ನು ಸಿಎಂ ನೇಮಿಸಿದ್ದಾರೆ ಎಂದರು.
ನದಿಗಳ ಪ್ರವಾಹ ಮತ್ತು ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗಲಿ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚುವರಿ ನೀರು ಬಿಟ್ಟರೆ ಆಗಬಹುದಾದ ಅನಾಹುತ ತಪ್ಪಿಸಬಹುದು. ಇದನ್ನು ಮಹಾರಾಷ್ಟ್ರದ ಜಿಲ್ಲಾಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.