ತಾರಕಕ್ಕೇರಿದೆ 'ಕುದುರೆ' ವಿಷ್ಯ; ಜನರಿಂದ ತಿರಸ್ಕರಿಸಲ್ಪಟ್ಟ ಸಿ.ಪಿ.ಯೋಗೇಶ್ವರ್ 'ಸತ್ತ ಕುದುರೆ'!

hdk shivakumar yogeshwar
Published on

ಚನ್ನಪಟ್ಟಣ: ಎಚ್​.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ನಿವೃತ್ತ ಕುದುರೆಗಳು ಎಂದಾದರೆ ವಿಧಾನ ಪರಿಷತ್​ ಸದಸ್ಯ ಸಿ.ಪಿ.ಯೋಗೇಶ್ವರ್ ಸತ್ತ ಕುದುರೆ ಇದ್ದಂತೆ ಎಂದು ಜೆಡಿಎಸ್ ಮುಖಂಡರು ಲೇವಡಿ ಮಾಡಿದರು.

ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನಗೊಂಡ ಬಳಿಕ ನಿನ್ನೆ(ಶುಕ್ರವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸಿ.ಪಿ. ಯೋಗೇಶ್ವರ್, ತನ್ನ ರಾಜಕೀಯ ಎದುರಾಳಿಗಳಾದ 'ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ನಿವೃತ್ತ ( ರಿಡೈರ್ಡ್) ಕುದುರೆಗಳು' ಎಂದು ಲೇವಡಿ ಮಾಡಿದ್ದರು. ಈ ಮಾತಿಗೆ ಗರಂ ಆದ ಚನ್ನಪಟ್ಟಣ ಜೆಡಿಎಸ್ ಮುಖಂಡರು, ತಮ್ಮ ಶಾಸಕರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್ ಸ್ಥಾನವನ್ನು ಕಾಡಿಬೇಡಿ ಪಡೆದಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​ಗೆ ನಮ್ಮ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಜನರಿಂದ ಆಯ್ಕೆ ಆಗಿರುವ ನಮ್ಮ

ಶಾಸಕರನ್ನು ನಿವೃತ್ತಿ ಕುದುರೆ ಎನ್ನುವ ನೀವು, ಜನರಿಂದ ತಿರಸ್ಕರಿಸಲ್ಪಟ್ಟ ಸತ್ತ ಕುದುರೆ ಎಂದು ಜರಿದರು.

ಕಳೆದ ಚುನಾವಣೆಯಲ್ಲಿ ಸೋತ ನೀವು ಇಷ್ಟು ಎಲ್ಲಿದ್ರಿ? ನೀವೇ ಹೇಳಿರುವಂತೆ ಯಾವ ಅಜ್ಞಾತ ವಾಸದಲ್ಲಿದ್ರೀ? ಎಂಬುದನ್ನು ತಿಳಿಸಿ. ಅಧಿಕಾರ ಇದ್ದರಷ್ಟೆ ನೀವು ಜನಸೇವೆ ಮಾಡೋದಾ? ಎಂದು ಪ್ರಶ್ನಿಸಿದರು.

ನಿಮ್ಮ ಅಹಂ ಹಾಗೂ ಗರ್ವವನ್ನು ಜನಸೇವೆ ಮಾಡುವ ಮೂಲಕ ತೋರಿಸಿ. ನಮ್ಮ ನಾಯಕರ ಬಗ್ಗೆ ಲಘುವಾಗಿ ಮಾತನಾಡಿದರೆ ನಾವು ಸುಮ್ಮನೆ ಇರೋದಿಲ್ಲ ಎಂದು ಯೋಗೇಶ್ವರ್​ಗೆ ಎಚ್ಚರಿಕೆ ನೀಡಿದ್ದಾರೆ.

ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ನಗರ ಅಧ್ಯಕ್ಷ ರಾಂಪುರ ರಾಜಣ್ಣ. ಹಿರಿಯ ಮುಖಂಡ ಹಾಪ್​ಕಾಮ್ಸ್ ದೇವರಾಜು, ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net