

ಚನ್ನಪಟ್ಟಣ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಬ್ಬರೂ ನಿವೃತ್ತ ಕುದುರೆಗಳು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಲೇವಡಿ ಮಾಡಿದರು.
ಎಂಎಲ್ಸಿ ಆಗಿ ನಾಮನಿರ್ದೇನಗೊಂಡ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಯೋಗೇಶ್ವರ್, ನಗರದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯೇಗೇಶ್ವರ್, 'ಡಿಕೆಶಿ ಮತ್ತು ಎಚ್ಡಿಕೆ ವಿರುದ್ಧ ಹೋರಾಡಲು ನನಗೆ ಕಷ್ಟವೇನಿಲ್ಲ. ಈ ಇಬ್ಬರೂ ರಿಟೈಡ್ ಆಗಿರುವ ಕುದುರೆಗಳು' ಎಂದು ಕುಟುಕಿದರು.
ಎಚ್.ಡಿ. ಕುಮಾರಸ್ವಾಮಿ ಈಗ ಓರ್ವ ಸಾಮಾನ್ಯ ಶಾಸಕರಷ್ಟೆ. ನಾನು ಕೂಡ ಶಾಸಕ. ಅವರು ತಮ್ಮ ಪಕ್ಷವನ್ನು ಪುನಶ್ಚೇತನಗೊಳಿಸಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಅವರು ಬಹಳ ಹತಾಶೆಯಾಗಿದ್ದಾರೆ. ಅಧಿಕಾರ ಸಿಕ್ಕಾಗ ನಿಭಾಯಿಸಲು ಸಾಧ್ಯವಾಗಲಿಲ್ಲ. ಇದೀಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಯೇಗೇಶ್ವರ್ ಟೀಕಿಸಿದರು.
ಇನ್ನೊಂದೆಡೆ ನಮ್ಮ ಸ್ನೇಹಿತರು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆಗಿದ್ದಾಗಲೇ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಅವರಿಗೆ ಸಿಕ್ಕಿರುವುದು ರಾಜಕೀಯ ಆಶ್ರಯ ನೀಡುವ ಹುದ್ದೆ. ಅದನ್ನು ಹೊರತುಪಡಿಸಿ, ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಾರೆ ಎಂಬ ಆಶಯ ನನಗಿಲ್ಲ ಎಂದು ಡಿ.ಕೆ.ಶಿವಕುಮಾರ್ರನ್ನು ಲೇವಡಿ ಮಾಡಿದರು. ಈ ಇಬ್ಬರ ವಿರುದ್ಧ ರಾಜಕೀಯ ಮಾಡಲು ನನಗೆ ಯಾವ ಸಮಸ್ಯೆಯೂ ಇಲ್ಲ ಎಂದು ಯೋಗೇಶ್ವರ್ ಸ್ಪಷ್ಟಪಡಿಸಿದರು.
ಕಳೆದ ಚುನಾವನೆಯಲ್ಲಿ ಸೋತ ಬೇಸರಕ್ಕೆ ಸಾರ್ವಜನಿಕ ಜೀವನದಿಂದ ದೂರವಿದ್ದೆ. ಇದೀಗ ಬಿಜೆಪಿ ಸರ್ಕಾರ ಮೇಲ್ಮನೆ ಸದಸ್ಯನಾಗಿಸುವ ಮೂಲಕ ನನಗೆ ರಾಜಕೀಯ ಶಕ್ತಿ ತುಂಬಿದೆ ಎನ್ನುತ್ತ ಸಿಪಿವೈ ಭಾವುಕರಾದರು. ನನ್ನ ರಾಜಕೀಯ ಜೀವನ ಕೊನೆಯಾಗಬಾರದು ಎಂಬ ಉದ್ದೇಶದಿಂದ ಪಕ್ಷ ನನಗೆ ಈ ಸ್ಥಾನ ನೀಡಿದೆ. ನನ್ನ ಸಿನಿರಂಗದ ಪಯಣ ಈ ಹುದ್ದೆ ದೊರಕಲು ನೆಪವಾಯಿತು. ನಾನು ಸಚಿವ ಸ್ಥಾನ ಕೇಳಿಲ್ಲ. ಆದರೆ, ಸಂಪುಟದಲ್ಲಿ ಸ್ಥಾನ ಸಿಗುವ ಭರವಸೆಯಿದೆ ಎಂದರು.
ನನಗೆ ತಾಲೂಕಿನ ಅಭಿವೃದ್ಧಿ ಮುಖ್ಯ. ಕ್ಷೇತ್ರದ ಶಾಸಕರಿಗೆ ಸಹಕಾರ ನೀಡುವ ಜತೆಗೆ ತಾಲೂಕಿಗೆ ಆಗಬೇಕಾದ ಕೆಲಸಗಳ ಬಗ್ಗೆ ಗಮನ ನೀಡುತ್ತೇನೆ. ಆ ಉದ್ದೇಶದಿಂದಲೇ ಅಧಿಕಾರ ಸಿಕ್ಕ ತಕ್ಷಣ ನನ್ನ ಊರಿಗೆ ಬಂದಿದ್ದೇನೆ ಎಂದರು.