

ಬೆಂಗಳೂರು: ರಕ್ಷಿತ್ ಶೆಟ್ಟಿಗೆ ಪರಭಾಷಾ ಚಿತ್ರಗಳಿಂದ ಆಫರ್ ಹೊಸದೇನಲ್ಲ. ಕೆಲವು ವರ್ಷಗಳ ಹಿಂದೆಯೇ, ತನಗೆ ಪರಭಾಷೆಗಳಿಂದ ಸಾಕಷ್ಟು ಆಫರ್ಗಳು ಬರುತ್ತಿದ್ದು, ಇಲ್ಲೇ ಸಾಕಷ್ಟು ಕೆಲಸಗಳು ಇರುವಾಗ ಅಲ್ಲಿ ಹೋಗಿ ಏನು ಮಾಡುವುದು ಎಂದು ರಕ್ಷಿತ್ ಕೇಳಿದ್ದರು. ಬಂದ ಅವಕಾಶಗಳನ್ನು ಬಿಟ್ಟು ಕನ್ನಡದಲ್ಲೇ ನಟಿಸುವುದನ್ನು ಮುಂದುವರೆಸಿದರು.
ಈಗ ರಕ್ಷಿತ್ಗೆ ತಮಿಳಿನಿಂದ ಒಂದು ಆಫರ್ ಬಂದಿದೆ. ಈ ಬಾರಿ ದೊಡ್ಡ ಅವಕಾಶವೇ ಸಿಕ್ಕಿದೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ವಿಜಯ್ ಅಭಿನಯಿಸುತ್ತಿರುವ 'ದಳಪತಿ 67' ಎಂಬ ಹೊಸ ಚಿತ್ರದಲ್ಲಿ ರಕ್ಷಿತ್ಗೆ ನಟಿಸುವುದಕ್ಕೆ ಕೇಳಲಾಗಿದೆ ಎಂಬ ಸುದ್ದಿಯೊಂದು ಚೆನ್ನೈನಿಂದ ಬಂದಿದೆ. ರಕ್ಷಿತ್ ಈ ಚಿತ್ರವನ್ನು ಇದುವರೆಗೂ ಒಪ್ಪಿಕೊಳ್ಳದಿದ್ದರೂ, ಚಿತ್ರದ ಭಾಗವಾದರೆ ಹೇಗೆ ಎಂದು ಯೋಚಿಸುತ್ತಿದ್ದಾರಂತೆ. ಒಂದು ಪಕ್ಷ ಅವರು ನಟಿಸುವುದಕ್ಕೆ ಒಪ್ಪಿಕೊಂಡರೆ, ಇದು ಅವರ ಮೊದಲ ಅನ್ಯಭಾಷೆಯ ಚಿತ್ರವಾಗುತ್ತದೆ.
'ದಳಪತಿ 67' ಚಿತ್ರದಲ್ಲಿ ವಿಜಯ್ ಜತೆಗೆ ಸಂಜಯ್ ದತ್, ತ್ರಿಷಾ, ಮಿಸ್ಕಿನ್, ಗೌತಮ್ ಮೆನನ್, ಪ್ರಿಯಾ ಆನಂದ್ ಮುಂತಾದವರು ನಟಿಸುತ್ತಿದ್ರದು, ಒಂದು ಪಕ್ಷ ರಕ್ಷಿತ್ ಸಹ ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರೆ, ಚಿತ್ರ ಇನ್ನಷ್ಟು ದೊಡ್ಡದಾಗಲಿದೆ. ಅಷ್ಟೇ ಅಲ್ಲ, ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಲಿದೆ.
ಈ ಚಿತ್ರಕ್ಕೆ ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ಚಿತ್ರೀಕರಣ ಪ್ರಾರಂಭವಾಗಿದ್ದು, ವಿಜಯ್ ಮತ್ತು ಮಿಸ್ಕಿನ್ ಅಭಿನಯದ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಚಿತ್ರತಂಡವು ಜ.22ರಂದು ಚಿತ್ರದ ಬಗ್ಗೆ ಒಂದು ಪ್ರಮುಖ ಸುದ್ದಿಯನ್ನು ಹಂಚಿಕೊಳ್ಳುವ ಸುದ್ದಿ ಇದ್ದು, ಆ ಆ ಸುದ್ದಿ ಏನಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ.